ಡಯೆಟ್ ಮಾಡುವವರು ಅಥವಾ ಸಣ್ಣ ಆಗಲು ಬಯಸುವವರು ಓಟ್ಸ್ ತಿನ್ನುವುದನ್ನು ಆಯ್ಕೆ ಮಾಡುತ್ತಾರೆ. ಆದರೆ ಪ್ರತಿದಿನ ಒಂದೇ ರೀತಿಯಾಗಿ ಓಟ್ಸ್ ತಿನ್ನುವುದು ಬೇಸರವಾಗಬಹುದು. ಅದಕ್ಕೆ ಸ್ವಲ್ಪ ವಿಭಿನ್ನವಾಗಿ, ರುಚಿಯಾಗಿ ತಯಾರಿಸಿದರೆ ಆರೋಗ್ಯಕ್ಕೂ ಒಳ್ಳೆಯದು, ತಿನ್ನುವುದಕ್ಕೂ ಖುಷಿ. ಇವತ್ತು ನಾವು ಓಟ್ಸ್ ಮಸಾಲಾ ರೆಸಿಪಿ ಹೇಗೆ ತಯಾರಿಸಬಹುದು ಎಂಬುದನ್ನು ತಿಳಿಯೋಣ.
ಬೇಕಾಗುವ ಸಾಮಗ್ರಿಗಳು:
ಓಟ್ಸ್ – 1 ಕಪ್
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಟೊಮೆಟೊ – 1
ಹೆಚ್ಚಿದ ಕ್ಯಾರೆಟ್ – 2 ಚಮಚ
ಹಸಿ ಮೆಣಸಿನಕಾಯಿ – 2
ಬಟಾಣಿ – 2 ಚಮಚ
ಗರಂ ಮಸಾಲ – ಅರ್ಧ ಚಮಚ
ಅಚ್ಚ ಖಾರದ ಪುಡಿ – ಅಗತ್ಯಕ್ಕೆ ತಕ್ಕಷ್ಟು
ಅರಶಿಣ ಪುಡಿ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಮೊದಲಿಗೆ ಒಂದು ಬಾಣಲೆಗೆ ಓಟ್ಸ್ ಹಾಕಿ ಗರಿ ಗರಿಯಾಗುವವರೆಗೂ ಹುರಿದು ಪಕ್ಕಕ್ಕೆ ಇಡಿ. ನಂತರ ಒಂದು ಪ್ಯಾನ್‌ನಲ್ಲಿ ಒಂದು ಚಮಚ ತುಪ್ಪ ಹಾಕಿ ಬಿಸಿಯಾದ ಬಳಿಕ ಜೀರಿಗೆ ಹಾಕಿ. ಜೀರಿಗೆ ಕೆಂಪಾದ ನಂತರ 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೂ ಫ್ರೈ ಮಾಡಿ.
ಈಗ ಹೆಚ್ಚಿದ ಈರುಳ್ಳಿಯನ್ನು ಹಾಕಿ ಚನ್ನಾಗಿ ಹುರಿದುಕೊಂಡು, ಬಳಿಕ ಟೊಮೆಟೊ, ಕ್ಯಾರೆಟ್ ಹಾಗೂ ಬಟಾಣಿಯನ್ನು ಸೇರಿಸಿ ಸ್ವಲ್ಪ ಕಾಲ ಬೇಯಿಸಬೇಕು. ನಂತರ ಇದಕ್ಕೆ ಖಾರದ ಪುಡಿ, ಅರಶಿಣ, ಗರಂ ಮಸಾಲ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಹಾಕಿ, ಹುರಿದ ಓಟ್ಸ್ ಸೇರಿಸಿ 5-6 ನಿಮಿಷ ಬೇಯಿಸಬೇಕು. ಸಿದ್ಧವಾದ ಬಳಿಕ ಸರ್ವಿಂಗ್ ಪ್ಲೇಟ್‌ಗೆ ಹಾಕಿ ಬಿಸಿ ಬಿಸಿಯಾಗಿ ಸವಿಯಿರಿ.