ಅನ್ನ ಎರಡು ತುತ್ತು ಹೆಚ್ಚಾಗಿ ತಿನ್ನುವಂತಹ ವಿಶೇಷ ರುಚಿಯ ಜೊತೆಗೆ ಕೂದಲು ಮತ್ತು ಕಣ್ಣಿನ ಆರೋಗ್ಯಕ್ಕೂ ಮದ್ದು ಆಗುವ ಚಟ್ನಿ ಬೇಕಾದ್ರೆ ಕರಿಬೇವಿನ ಚಟ್ನಿ ಟ್ರೈ ಮಾಡಿ. ಸಾಮಾನ್ಯವಾಗಿ ಒಗ್ಗರಣೆಗೆ ಮಾತ್ರ ಬಳಕೆಯಾಗುವ ಕರಿಬೇವು, ಚಟ್ನಿಯಾಗಿ ಮಾಡಿದ್ರೆ ಅಡುಗೆಮನೆಯ ಸ್ಟಾರ್ ಆಗಿಬಿಡುತ್ತೆ. ಬಿಸಿ ಅನ್ನ, ದೋಸೆ, ಇಡ್ಲಿ, ಚಪಾತಿ ಎಲ್ಲದಕ್ಕೂ ಸೂಪರ್ ಕಾಂಬಿನೇಷನ್.
ಬೇಕಾಗುವ ಸಾಮಗ್ರಿಗಳು
ಚಟ್ನಿಗೆ:
ಕರಿಬೇವಿನ ಸೊಪ್ಪು – ½ ಕಪ್
ತೆಂಗಿನ ತುರಿ – 1 ಕಪ್
ಕಡಲೆಕಾಯಿ – 2 ಚಮಚ
ಶುಂಠಿ – 1 ಇಂಚು
ಬೆಳ್ಳುಳ್ಳಿ – 5 ಎಸಳು
ಒಣ ಕೆಂಪು ಮೆಣಸಿನಕಾಯಿ – 4–5
ಹುಣಸೆಹಣ್ಣು – ಸಣ್ಣ ತುಂಡು
ಎಣ್ಣೆ – 2 ಚಮಚ
ಕೊತ್ತಂಬರಿ ಸೊಪ್ಪು – 2 ಚಮಚ
ಉಪ್ಪು – ರುಚಿಗೆ
ನೀರು – ಅಗತ್ಯವಿರುವಷ್ಟು
ಒಗ್ಗರಣೆಗೆ:
ಎಣ್ಣೆ – 2 ಚಮಚ
ಸಾಸಿವೆ – ½ ಚಮಚ
ಉದ್ದಿನ ಬೇಳೆ – ½ ಚಮಚ
ಇಂಗು – ಚಿಟಿಕೆ
ಒಣ ಮೆಣಸಿನಕಾಯಿ – 1–2
ಕರಿಬೇವಿನ ಎಲೆ – ಸ್ವಲ್ಪ
ತಯಾರಿಸುವ ವಿಧಾನ
ಮೊದಲು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಬೆಳ್ಳುಳ್ಳಿ, ಶುಂಠಿ ಮತ್ತು ಒಣ ಮೆಣಸಿನಕಾಯಿ ಹಾಕಿ ಸ್ವಲ್ಪ ಹುರಿಯಿರಿ. ನಂತರ ಕಡಲೆಕಾಯಿ, ಕರಿಬೇವಿನ ಸೊಪ್ಪು ಮತ್ತು ಹುಣಸೆಹಣ್ಣು ಸೇರಿಸಿ, ಕರಿಬೇವು ಸ್ವಲ್ಪ ಬಾಡಿ ಸುಗಂಧ ಬಂದರೆ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ.
ಈ ಮಿಶ್ರಣವನ್ನು ಮಿಕ್ಸಿ ಜಾರಿಗೆ ಹಾಕಿ. ತೆಂಗಿನ ತುರಿ, ಕೊತ್ತಂಬರಿ ಸೊಪ್ಪು, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಚಟ್ನಿ ಗಟ್ಟಿಯಾಗಿರಲಿ. ನೀರನ್ನು ನಿಧಾನವಾಗಿ ಸೇರಿಸಿ.
ಕೊನೆಗೆ ಒಗ್ಗರಣೆಗೆ, ಸಣ್ಣ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಸಿಡಿದ ಬಳಿಕ ಉದ್ದಿನ ಬೇಳೆ, ಇಂಗು, ಒಣ ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ ಹುರಿಯಿರಿ. ಈ ಬಿಸಿ ಒಗ್ಗರಣೆಯನ್ನು ಚಟ್ನಿಯ ಮೇಲೆ ಹಾಕಿ.


