Tuesday, January 13, 2026
Tuesday, January 13, 2026
spot_img

Foot Care | ಚಳಿಗಾಲದಲ್ಲಿ ಹಿಮ್ಮಡಿ ನೋವು ಕಾಣಿಸೋದು ಯಾಕೆ? ಮನೆಯಲ್ಲೇ ಪರಿಹಾರ ಏನು?

ಚಳಿಗಾಲ ಬಂದಾಗ ಹಲವರಿಗೆ ಕಾಲು ನೆಲಕ್ಕೆ ಇಡಲಿಕ್ಕೇ ನೋವಾಗುತ್ತದೆ. ವಿಶೇಷವಾಗಿ ಬೆಳಿಗ್ಗೆ ಎದ್ದ ತಕ್ಷಣ ಹಿಮ್ಮಡಿಯಲ್ಲಿ ಚುಚ್ಚುವಂಥ ನೋವು, ನಡೆಯುವಾಗ ಕಿರಿಕಿರಿ – ಇದು ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಿಸೋ ಸಮಸ್ಯೆ. ಕೆಲವರು ಇದನ್ನು ತಾತ್ಕಾಲಿಕ ನೋವು ಅಂತ ನಿರ್ಲಕ್ಷ್ಯ ಮಾಡ್ತಾರೆ. ಆದರೆ ಸಮಯಕ್ಕೆ ಗಮನ ಕೊಡದೇ ಹೋದರೆ ಇದು ದೀರ್ಘಕಾಲದ ಸಮಸ್ಯೆಯಾಗಬಹುದು. ಹೀಗಾದ್ರೆ ಯಾಕೆ ಚಳಿಗಾಲದಲ್ಲಿ ಹಿಮ್ಮಡಿ ನೋವು ಹೆಚ್ಚಾಗುತ್ತೆ? ಮನೆಯಲ್ಲೇ ಏನು ಮಾಡಬಹುದು? ಇಲ್ಲಿದೆ ಸರಳವಾಗಿ ಅರ್ಥವಾಗುವ ಮಾಹಿತಿ.

ಚಳಿಯಿಂದ ರಕ್ತ ಸಂಚಾರ ಕಡಿಮೆಯಾಗುವುದು:

ಚಳಿಗಾಲದಲ್ಲಿ ರಕ್ತನಾಳಗಳು ಸಂಕುಚಿತವಾಗುತ್ತವೆ. ಇದರಿಂದ ಕಾಲುಗಳ ಕಡೆ ರಕ್ತ ಸಂಚಾರ ಕಡಿಮೆಯಾಗುತ್ತದೆ. ಹಿಮ್ಮಡಿ ಭಾಗಕ್ಕೆ ಸಾಕಷ್ಟು ಪೋಷಣೆ ಸಿಗದೆ ನೋವು ಕಾಣಿಸಿಕೊಳ್ಳುತ್ತದೆ.

ಚರ್ಮ ಒಣಗುವುದು ಮತ್ತು ಬಿರುಕು ಬೀಳುವುದು:

ಚಳಿ ಗಾಳಿ ಚರ್ಮದ ತೇವಾಂಶವನ್ನು ಹೀರಿಕೊಳ್ಳುತ್ತದೆ. ಹಿಮ್ಮಡಿಯಲ್ಲಿ ಚರ್ಮ ಒಣಗಿ ಬಿರುಕು ಬಿಟ್ಟರೆ ನಡೆಯುವಾಗ ತೀವ್ರ ನೋವು ಉಂಟಾಗುತ್ತದೆ.

ಪ್ಲಾಂಟರ್ ಫ್ಯಾಸಿಯೈಟಿಸ್ ಸಮಸ್ಯೆ:

ಹಿಮ್ಮಡಿಯ ಕೆಳಭಾಗದಲ್ಲಿರುವ ನರಬಂಧ (plantar fascia) ಚಳಿಯಲ್ಲಿ ಗಟ್ಟಿಯಾಗುತ್ತದೆ. ಬೆಳಿಗ್ಗೆ ಮೊದಲ ಹೆಜ್ಜೆ ಇಡೋವಾಗ ಹೆಚ್ಚು ನೋವು ಆಗೋದು ಇದರಿಂದಲೇ.

ತಪ್ಪು ಚಪ್ಪಲಿ ಅಥವಾ ಬೆರಳಿಲ್ಲದ ಪಾದರಕ್ಷೆ:

ಚಳಿಯಲ್ಲಿ ತೆರೆದ ಚಪ್ಪಲಿ, ಸ್ಲಿಪ್ಪರ್ ಬಳಸಿದ್ರೆ ಕಾಲುಗಳಿಗೆ ಸರಿಯಾದ ಬೆಂಬಲ ಸಿಗುವುದಿಲ್ಲ. ಇದರಿಂದ ಹಿಮ್ಮಡಿ ಮೇಲೆ ಒತ್ತಡ ಹೆಚ್ಚುತ್ತದೆ.

ಮನೆಯಲ್ಲೇ ಮಾಡಬಹುದಾದ ಸರಳ ಪರಿಹಾರ:

ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಹಾಕಿ ಕಾಲು ನೆನೆಸುವುದು ರಕ್ತಸಂಚಾರ ಹೆಚ್ಚಿಸುತ್ತದೆ. ರಾತ್ರಿ ಮಲಗುವ ಮೊದಲು ತೆಂಗಿನೆಣ್ಣೆ ಅಥವಾ ತುಪ್ಪ ಹಚ್ಚಿ ಮಸಾಜ್ ಮಾಡುವುದು ತುಂಬಾ ಉಪಯುಕ್ತ.

ಸಣ್ಣ ವ್ಯಾಯಾಮ ಮತ್ತು ಕಾಳಜಿ:

ಕಾಲು ಬೆರಳುಗಳನ್ನು ಎಳೆಯುವುದು, ಟವೆಲ್‌ನಿಂದ ಸ್ಟ್ರೆಚ್ ಮಾಡುವುದು ಹಿಮ್ಮಡಿ ನೋವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಮೃದುವಾದ, ಬೆಂಬಲ ನೀಡುವ ಪಾದರಕ್ಷೆ ಧರಿಸುವುದು ಅಗತ್ಯ.

ಚಳಿಗಾಲದಲ್ಲಿ ಹಿಮ್ಮಡಿ ನೋವು ಸಣ್ಣ ಸಮಸ್ಯೆ ಅನ್ನಿಸಬಹುದು, ಆದರೆ ಸರಿಯಾದ ಕಾಳಜಿ ಇಲ್ಲದಿದ್ದರೆ ದೊಡ್ಡ ತೊಂದರೆಯಾಗಬಹುದು. ದಿನನಿತ್ಯದ ಈ ಸಣ್ಣ ಅಭ್ಯಾಸಗಳು ನಿಮ್ಮ ಕಾಲುಗಳಿಗೆ ಆರಾಮ ಕೊಡುವುದಲ್ಲದೆ ನೋವಿಲ್ಲದ ನಡೆಗೂ ಸಹಾಯ ಮಾಡುತ್ತವೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

Most Read

error: Content is protected !!