ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳಕ್ಕೆ ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಸಾರಥ್ಯದ ಅರ್ಜೆಂಟಿನಾ ತಂಡ ಆಗಮಿಸಿ ಸೌಹಾರ್ದ ಪಂದ್ಯ ಆಡಲಿರುವುದನ್ನು ಅರ್ಜೆಂಟಿನಾ ತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಇದರೊಂದಿಗೆ ಮೆಸ್ಸಿ ಪಡೆ ಭಾರತದಲ್ಲಿ ಕಣಕ್ಕಿಳಿಯುವ ಅನುಮಾನ ಮತ್ತು ಗೊಂದಲಕ್ಕೆ ತೆರೆಬಿದ್ದಿದೆ.
ಕೇರಳದ ಕ್ರೀಡಾ ಸಚಿವ ವಿ. ಅಬ್ದುರಹಿಮಾನ್ ಕೂಡ ಮೆಸ್ಸಿ ಆಗಮನವನ್ನು ಖಚಿತಪಡಿಸಿದ್ದಾರೆ.
ಇದೀಗ ಕೇರಳ ಸರ್ಕಾರ ಮೆಸ್ಸಿ ಭೇಟಿಯನ್ನು ಖಚಿತಪಡಿಸಿದ್ದು, ವ್ಯವಸ್ಥಾಪಕ ಲಿಯೋನೆಲ್ ಸ್ಕಲೋನಿ ನೇತೃತ್ವದ ಅರ್ಜೆಂಟಿನಾ ರಾಷ್ಟ್ರೀಯ ತಂಡವು ಕೇರಳದ ಅಂಗೋಲಾ ಮತ್ತು ಲೋಂಡಾದಲ್ಲಿ ಸೌಹಾರ್ದ ಪಂದ್ಯಗಳ ಆಡಲಿದೆ ಎಂದು ತಿಳಿಸಿದೆ.
ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಪಂದ್ಯ ಆಯೋಜಿಸುವ ಕುರಿತು ಕೇರಳ ಸರ್ಕಾರವು ಅರ್ಜೆಂಟಿನಾ ಫುಟ್‌ಬಾಲ್ ಸಂಸ್ಥೆಯನ್ನು ಕೋರಿತ್ತು. ಆರಂಭಿಕ ಹಂತದಲ್ಲಿ ಅರ್ಜೆಂಟಿನಾ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು. ಆದರೆ ಆ ಬಳಿಕ 2026ರಲ್ಲಿ ಭೇಟಿ ನೀಡುವುದಾಗಿ ತಂಡವು ಹೇಳಿತ್ತು. ಹೀಗಾಗಿ ಮೆಸ್ಸಿ ತಂಡ ಕೇರಳದಲ್ಲಿ ಫುಟ್ಬಾಲ್ ಆಡುವುದು ಅನುಮಾನ ಎಂಬ ಸುದ್ದಿ ಎಲ್ಲಡೆ ಹರಡಿತ್ತು. ಇದೀಗ ಇದೇ ವರ್ಷ ಭೇಟಿ ನೀಡುವ ಕೇರಳ ಸರ್ಕಾರದ ಕೋರಿಕೆಯನ್ನು ಅರ್ಜೆಂಟಿನಾ ಒಪ್ಪಿಕೊಂಡು ಅದನ್ನು ಖಚಿತಪಡಿಸಿದೆ.
‘2022ರ ವಿಶ್ವಕಪ್ ವಿಜೇತ ತಂಡವನ್ನು ಸ್ವಾಗತಿಸಲು ಉತ್ಸುಕರಾಗಿದ್ದೇವೆ. ಲಕ್ಷಾಂತರ ಫುಟ್ಬಾಲ್ ಪ್ರೇಮಿಗಳು ತಮ್ಮ ನೆಚ್ಚಿನ ತಂಡದ ಆಟವನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಕೇರಳದಲ್ಲಿ ಮೆಸ್ಸಿ ಆಡುವುದನ್ನು ನೋಡಲು ಜನರಿಗೆ ಅವಕಾಶ ಮಾಡಿಕೊಡಬೇಕು ಎಂಬುದಷ್ಟೇ ನಮ್ಮ ಉದ್ದೇಶ. ಈ ಕಾರ್ಯಕ್ರಮ ಕುರಿತು ಸರ್ಕಾರ ಅಧಿಕೃತ ಆದೇಶ ಹೊರಡಿಸಲು ಕೇಂದ್ರ ಕ್ರೀಡಾ ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಒಪ್ಪಿಗೆ ಸೂಚಿಸಿದೆ’ ಎಂದು ಅಬ್ದುರಹಿಮಾನ್ ಹೇಳಿದ್ದಾರೆ.