ಡಿಸೆಂಬರ್‌ನಲ್ಲಿ ಭಾರತಕ್ಕೆ ಫುಟ್ಬಾಲ್ ಸ್ಟಾರ್ ಲಿಯೋನಲ್​ ಮೆಸ್ಸಿ ಆಗಮನ: ಕಾರಣವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ವರ್ಷ ಡಿಸೆಂಬರ್‌ನಲ್ಲಿ ಖಾಸಗಿ ಕಾರ್ಯಕ್ರಮ ನಿಮಿತ್ತ ಭಾರತಕ್ಕೆ ಅರ್ಜೆಂಟೀನಾದ ಖ್ಯಾತ ಫುಟ್ಬಾಲ್‌ ತಾರೆ ಲಿಯೋನೆಲ್‌ ಮೆಸ್ಸಿ ಆಗಮಿಸಲಿದ್ದಾರೆ.

ಮೂರು ದಿನಗಳ ಭಾರತ ಪ್ರವಾಸದಲ್ಲಿ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.. ಇದೇ ವೇಳೆ ದಿಗ್ಗಜ ಕ್ರಿಕೆಟಿಗರಾದ ಸಚಿನ್‌ ತೆಂಡುಲ್ಕರ್‌, ವಿರಾಟ್‌ ಕೊಹ್ಲಿ, ಎಂ.ಎಸ್‌.ಧೋನಿ, ರೋಹಿತ್‌ ಶರ್ಮಾ ಸೇರಿ ಪ್ರಮುಖರ ಜತೆ ಕ್ರಿಕೆಟ್‌ ಆಡುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ವೇಳಾಪಟ್ಟಿಯ ಅನುಸಾರ ಮೆಸ್ಸಿ ಡಿಸೆಂಬರ್ 12ರ ರಾತ್ರಿ ಕೋಲ್ಕತ್ತಾಕ್ಕೆ ಬಂದಿಳಿಯಲಿದ್ದಾರೆ. ಇಲ್ಲಿನ ವಿಐಪಿ ರಸ್ತೆಯ ಲೇಕ್‌ಟೌನ್‌ನ ಶ್ರೀಭೂಮಿಯಲ್ಲಿ ಮೆಸ್ಸಿ ಅವರ 70 ಅಡಿ ಎತ್ತರದ ‍ಪ್ರತಿಮೆಯನ್ನು ಸ್ವತಃ ಅವರೇ ಡಿ. 13ರಂದು ಬೆಳಿಗ್ಗೆ ಅನಾವರಣಗೊಳಿಸಲಿದ್ದಾರೆ. ಇದಾದ ಬಳಿಕ ಅವರು ಮಧ್ಯಾಹ್ನ 12 ರಿಂದ ಈಡನ್‌ಗಾರ್ಡನ್‌ನಲ್ಲಿ ತಲಾ ಏಳು ಮಂದಿ ಇರುವ ತಂಡಗಳ ನಡುವೆ ಆಡಲಾಗುವ ‘ಗೋಟ್‌ ಕಪ್‌’ ಪ್ರದರ್ಶನ ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.

13ರಂದು ಅವರು ಅಹ್ಮದಾಬಾದಿಗೆ ತೆರಳಲಿದ್ದು ಶಾಂತಿಗ್ರಾಮದಲ್ಲಿ ಅದಾನಿ ಪ್ರತಿಷ್ಠಾನದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. 14ರಂದು ಅವರು ಮುಂಬೈ ತಲುಪಲಿದ್ದು ಅಂದು ಸಂಜೆ ಗೋಟ್‌ ಕನ್ಸರ್ಟ್‌ ಮತ್ತು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಗೋಟ್‌ ಕಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. 15ರಂದು ಅವರು ದೆಹಲಿಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಭೇಟಿಯ ನಂತರ ಫಿರೋಜ್‌ ಶಾ ಕೋಟ್ಲಾದಲ್ಲಿ ಪ್ರದರ್ಶನ ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೋದಿ ಅವರ ಭೇಟಿಯೊಂದಿಗೆ ಭಾರತ ಪ್ರವಾಸ ಕೊನೆಗೊಳ್ಳಲಿದೆ.

ಇದು ಮೆಸ್ಸಿ ಅವರು ಭಾರತಕ್ಕೆ ನೀಡುತ್ತಿರುವ ಎರಡನೇ ಭೇಟಿಯಾಗಿದೆ. ಮೆಸ್ಸಿ 2011 ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದರು. ಈ ವೇಳೆ ಅವರು ಫುಟ್ಬಾಲ್‌ ಪಂದ್ಯವನ್ನಾಡಿದ್ದರು. ಮೆಸ್ಸಿಗೆ ಭಾರತದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಅದರಲ್ಲೂ ಕೇರಳದಲ್ಲಿ ಅಧಿಕ ಅಭಿಮಾನಿಗಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!