Saturday, December 6, 2025

ಮುರ್ಷಿದಾಬಾದ್‌ನಲ್ಲಿ ಬಾಬರಿ ಶೈಲಿಯ ಮಸೀದಿಗೆ ಶಿಲಾನ್ಯಾಸ: ಬಿಎಸ್‌ಎಫ್‌ ಕಣ್ಗಾವಲಿನಲ್ಲಿ ಜಿಲ್ಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬೆಲ್ಡಂಗಾ ತಾಲೂಕಿನ ರೆಜಿನಗರ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ಬಾಬರಿ ಮಸೀದಿ ಶೈಲಿಯ ಮಸೀದಿಯ ಶಿಲಾನ್ಯಾಸ ಕಾರ್ಯಕ್ರಮ ಇಂದು ನಡೆಯುವ ಸಾಧ್ಯತೆ ಇದೆ. ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ದಿನವಾದ ಡಿಸೆಂಬರ್ 6ರಂದು ಈ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಟಿಎಂಸಿ ಪಕ್ಷದಿಂದ ಉಚ್ಛಾಟಿತರಾಗಿರುವ ಶಾಸಕ ಹುಮಾಯೂನ್ ಕಬೀರ್ ಈ ಸಾಂಕೇತಿಕ ಶಿಲಾನ್ಯಾಸಕ್ಕೆ ಮುಂದಾಗಿದ್ದು, ಕಾರ್ಯಕ್ರಮದ ಹಿನ್ನೆಲೆ ಪ್ರದೇಶವನ್ನು ಸೂಕ್ಷ್ಮ ಪ್ರದೇಶವಾಗಿ ಘೋಷಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್‌, ಮೀಸಲು ಪಡೆ ಹಾಗೂ ಗಡಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಜಂಟಿ ಗಸ್ತು ಕಾರ್ಯಾಚರಣೆ ಆರಂಭವಾಗಿದೆ.

ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳಿಂದ ಮುಸ್ಲಿಂ ಧರ್ಮಗುರುಗಳು, ಸ್ವಯಂಸೇವಕರು ಆಗಮಿಸುವ ನಿರೀಕ್ಷೆಯಿದ್ದು, ಸುಮಾರು ಮೂರು ಲಕ್ಷ ಮಂದಿ ಸೇರಬಹುದು ಎಂದು ಆಯೋಜಕರು ಹೇಳಿದ್ದಾರೆ. ಸೌದಿ ಅರೇಬಿಯಾದಿಂದ ಇಬ್ಬರು ಖಾಜಿಗಳು ಭಾಗವಹಿಸುವ ಸಾಧ್ಯತೆಯೂ ಇದೆ. ಅತಿಥಿಗಳಿಗಾಗಿ ಶಾಹಿ ಬಿರಿಯಾನಿ ವ್ಯವಸ್ಥೆ ಮಾಡಲಾಗುತ್ತಿದ್ದು, ಸಾವಿರಾರು ಪ್ಯಾಕೆಟ್‌ಗಳನ್ನು ವಿತರಿಸುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಈ ಸಮಾರಂಭಕ್ಕೆ ಸ್ಥಳೀಯ ಆಡಳಿತದಿಂದ ಇನ್ನೂ ಅಧಿಕೃತ ಅನುಮತಿ ಲಭಿಸಿಲ್ಲ ಎನ್ನಲಾಗಿದೆ.

error: Content is protected !!