ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೊಲೀಸ್ ಯೂನಿಫಾರಂ ಧರಿಸಿ ತಾನು ಪಿಎಸ್‌ಐ ಎಂದು ನಂಬಿಸಿ, ಮನೆಗೆ ನುಗ್ಗಿ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಪಿಎಸ್‌ಐ ಸೇರಿದಂತೆ ನಾಲ್ವರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಲ್ಲಿಕಾರ್ಜುನ, ಪ್ರಮೋದ್, ವಿನಯ್ ಮತ್ತು ಹೃತ್ವಿಕ್ ಎಂದು ಗುರುತಿಸಲಾಗಿದೆ. ಪಿಎಸ್‌ಐ ಆಗುವ ಕನಸಿನಿಂದ ಎರಡು ಬಾರಿ ಪರೀಕ್ಷೆ ಬರೆದಿದ್ದ ಮಲ್ಲಿಕಾರ್ಜುನ, ಎರಡೂ ಬಾರಿ ವಿಫಲವಾದರೂ ತಾನು ಪೊಲೀಸ್ ಅಧಿಕಾರಿಯೇ ಎಂಬಂತೆ ಊರಲ್ಲಿ ಬಿಂಬಿಸಿಕೊಂಡಿದ್ದ.
ಐಷಾರಾಮಿ ಜೀವನದ ಆಸೆಯಿಂದ ಮಲ್ಲಿಕಾರ್ಜುನ ಅಪರಾಧದ ದಾರಿಗೆ ಇಳಿದಿದ್ದಾನೆ ಎನ್ನಲಾಗಿದೆ. ಈತನಿಗೆ ಹೃತ್ವಿಕ್ ಸಾಥ್ ನೀಡಿದ್ದು, ನವೀನ್ ಎಂಬ ವ್ಯಕ್ತಿಯ ಮನೆಗೆ ನುಗ್ಗಿದರೆ ಹಣ ಹಾಗೂ ಚಿನ್ನ ಸಿಗುತ್ತದೆ ಎಂದು ಮಾಹಿತಿ ನೀಡಿದ್ದ. ಅದರಂತೆ ಪೊಲೀಸ್ ವೇಷದಲ್ಲಿ ಕಾರಿನಲ್ಲಿ ನವೀನ್ ಮನೆಗೆ ತೆರಳಿದ ಆರೋಪಿಗಳು, ಗಾಂಜಾ ಪ್ರಕರಣದ ನೆಪದಲ್ಲಿ ಬೆದರಿಸಿ, ಲಾಠಿ ಮತ್ತು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ.
ಅರೆಸ್ಟ್ ಮಾಡಬಾರದು ಎಂದರೆ ಹಣ ಕೊಡಬೇಕು ಎಂದು ಬೆದರಿಸಿ ಖಾತೆ, ಬೀರು ಮತ್ತು ಪರ್ಸ್‌ನಲ್ಲಿದ್ದ ಒಟ್ಟು 1.42 ಲಕ್ಷ ರೂ. ಕಸಿದುಕೊಂಡು ಪರಾರಿಯಾಗಿದ್ದರು. ನವೀನ್ ನೀಡಿದ ದೂರಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿ, 45 ಸಾವಿರ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

