Tuesday, December 16, 2025

ಎಫ್‌ಬಿ ಗೆಳತಿ ಭೇಟಿಗೆ ಹೋಗಿದ್ದ ಉದ್ಯಮಿ ಮೇಲೆ ಹಲ್ಲೆ ಕೇಸ್‌: ನಾಲ್ವರು ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾಮಾಜಿಕ ಮಾಧ್ಯಮದಲ್ಲಿ ಹನಿಟ್ರ್ಯಾಪ್ ಮೂಲಕ ಆಮಿಷಕ್ಕೆ ಒಳಗಾಗಿ 39 ವರ್ಷದ ಉದ್ಯಮಿಯೊಬ್ಬರ ಮೇಲೆ ಹಲ್ಲೆ, ಅಕ್ರಮ ಬಂಧನ ಮತ್ತು ಹಣ ಸುಲಿಗೆ ಮಾಡಲು ಯತ್ನಿಸಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ರಚನಾ, ಮಾಲತಿ, ದರ್ಶನ್ ಮತ್ತು ರವಿ ಎಂದು ಗುರುತಿಸಲಾಗಿದೆ. ಡಿಸೆಂಬರ್ 12ರಂದು ಕೊಡಗಿನ ಮಡಿಕೇರಿಯಲ್ಲಿ ಈ ಘಟನೆ ನಡೆದಿತ್ತು. ಇನ್ನು ಈ ಕೃತ್ಯದಲ್ಲಿ ಭಾಗಿಯಾಗಿರುವ ಉಳಿದ ಶಂಕಿತರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನ ಪ್ರಕಾರ, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ನಿವಾಸಿಯಾಗಿರುವ ಸಂತ್ರಸ್ತ ಮಹೇಶ್ ಫೇಸ್‌ಬುಕ್ ಮೂಲಕ ರಚನಾ ಎಂಬ ಮಹಿಳೆ ಸ್ನೇಹ ಬೆಳೆಸಿಕೊಂಡಿದ್ದನು. ಆಕೆ ನವೆಂಬರ್ 28ರಂದು ಫೋನ್‌ಪೇ ಮೂಲಕ 5000 ರೂಪಾಯಿ ಹಣ ಪಡೆದುಕೊಂಡಿದ್ದಳು. ಹಣವನ್ನು ಹಿಂದಿರುಗಿಸುವಂತೆ ಮಹೇಶ್ ಕೇಳಿದಾಗ, ಮಹಿಳೆ ಮೈಸೂರು ಅಥವಾ ಕುಶಾಲನಗರಕ್ಕೆ ಬರುವಂತೆ ಹೇಳಿದ್ದಳು. ಇನ್ನು ಡಿಸೆಂಬರ್ 12ರಂದು ಮಹೇಶನನ್ನು ಮಡಿಕೇರಿಗೆ ಕರೆಸಿ ಮಾರುಕಟ್ಟೆ ಪ್ರದೇಶದ ಬಳಿಯ ಮನೆಗೆ ಕರೆದೊಯ್ದಿದ್ದಳು. ಅಲ್ಲಿ ಮಹೇಶನ ಜೊತೆ ಸ್ವಲ್ಪ ಸಮಯ ಕಳೆದಿದ್ದು ಅಲ್ಲದೆ ಸಂಜೆ ಮದ್ಯ ಸೇವಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಂದು ರಾತ್ರಿ ತುರ್ತು ಕಾರಣ ನೀಡಿ ರಚನಾ ಮನೆಯಿಂದ ಹೊರಟುಹೋಗಿದ್ದಳು. ಆಕೆ ಹೋದ ನಂತರ, ಮೂವರು ಪುರುಷರು ಮನೆಗೆ ನುಗ್ಗಿ ಮಹೇಶನ ಮೇಲೆ ಕೋಲು ಮತ್ತು ಕತ್ತಿಯ ಹಿಡಿಕೆಯಿಂದ ಹಲ್ಲೆ ನಡೆಸಿ, ಮುಖ, ಬಾಯಿ, ಎದೆ ಮತ್ತು ಕಾಲಿಗೆ ಗಾಯಗೊಳಿಸಿದ್ದಾರೆ. ಅಲ್ಲದೆ ಬಲವಂತವಾಗಿ ಬಂಧಿಸಿ, ವಿವಸ್ತ್ರಗೊಳಿಸಿ, ನಗ್ನ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

error: Content is protected !!