ಹೊಸ ದಿಗಂತ ವರದಿ, ದಾವಣಗೆರೆ
ಮಾದಕ ವಸ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಮನೂರು ಕುಟುಂಬದ ಆಪ್ತರಾಗಿರುವ ಕಾಂಗ್ರೆಸ್ ಮುಖಂಡ ಸೇರಿದಂತೆ ನಾಲ್ವರನ್ನು ಬಂಧಿಸಿರುವ ಪೊಲೀಸರು, ತಲೆಮರೆಸಿಕೊಂಡ ಇನ್ನೂ ಮೂವರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ಶಾಮನೂರು ವೇದಮೂರ್ತಿ ಅಲಿಯಾಸ್ ಜಿ.ಎಸ್.ವೇದಮೂರ್ತಿ(53 ವರ್ಷ), ಸಿದ್ದವೀರಪ್ಪ ಬಡಾವಣೆಯ ದೇವಕಿಶನ್(35 ವರ್ಷ), ರಾಜಸ್ಥಾನ ಮೂಲದ ರಾಮ್ ಸ್ವರೂಪ್(33 ವರ್ಷ), ಧೋಲಾರಾಮ್(36 ವರ್ಷ) ಬಂಧಿತ ಆರೋಪಿಗಳು. ಬಂಧಿತರಿAದ 10 ಲಕ್ಷ ರೂ. ಮೌಲ್ಯದ ಒಟ್ಟು 90 ಗ್ರಾಂ ಎಂ.ಡಿ.ಎಂ.ಎ, 200 ಗ್ರಾಂ ಓಪಿಯಂ ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡಿ ಬಂದ 1 ಲಕ್ಷ ರೂ. ನಗದು ಹಣ ಸೇರಿದಂತೆ 11 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೆ.ಹೆಚ್.ಪಟೇಲ್ ಬಡಾವಣೆಯ ಪಾರ್ಕ್ ನಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ಪರಮೇಶ್ವರ ಹೆಗಡೆ, ನಗರ ಡಿವೈಎಸ್ಪಿ ಬಿ.ಶರಣಬಸವೇಶ್ವರ, ವಿದ್ಯಾನಗರ ಠಾಣೆ ನಿರೀಕ್ಷಕಿ ವೈ.ಎಸ್.ಶಿಲ್ಪಾ ಮಾರ್ಗದರ್ಶನದಲ್ಲಿ ಪಿಎಸೈ ಜಿ.ನಾಗರಾಜ ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಸಧ್ಯ ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಶಾಮನೂರು ವೇದಮೂರ್ತಿ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ರಾಜಸ್ಥಾನ ಮೂಲದ ಆರೋಪಿಗಳಿಂದ ಡ್ರಗ್ಸ್ ತರಿಸಿ ಉದ್ಯಮಿಗಳು ಮತ್ತು ವಿದ್ಯಾರ್ಥಿಗಳಿಗೆ ಸರಬರಾಜು ಮಾಡುತ್ತಿದ್ದ ಆರೋಪ ಶಾಮನೂರು ವೇದಮೂರ್ತಿ ಮೇಲಿದೆ. ಆರೋಪಿ ರಾಮ್ ಸ್ವರೂಪ್ ಮೇಲೆ ಈಗಾಗಲೇ ರಾಜಸ್ಥಾನ ರಾಜ್ಯದ ಜೋಧಪುರದಲ್ಲಿ ಎನ್.ಡಿ.ಪಿ.ಎಸ್ ಹಾಗೂ ಆರ್ಮ್ಸ್ ಆಕ್ಟ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಇನ್ನೂ ಮೂವರು ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.

