ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ವತಿಯಿಂದ ಬೆಂಗಳೂರಿನಲ್ಲಿ ಇಂದು ಒಂದು ದಿನದ ಪ್ರಾದೇಶಿಕ ಸಭೆ ನಡೆಯಿತು.
ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದ ವಕ್ಫ್ ಮಂಡಳಿಗಳ ಹಿರಿಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಏಪ್ರಿಲ್‌ನಲ್ಲಿ ಜಾರಿಗೆ ಬಂದ ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ (ಉಮೀದ್) ಕಾಯ್ದೆ, 2025ರ ಅಡಿಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ವಕ್ಫ್ ಮಂಡಳಿಗಳನ್ನು ಬಲಪಡಿಸಲು ಮತ್ತು ಇತ್ತೀಚೆಗೆ ಪ್ರಾರಂಭಿಸಲಾದ ಉಮೀದ್ ಸೆಂಟ್ರಲ್ ಪೋರ್ಟಲ್ ಮೂಲಕ ವಕ್ಫ್ ಆಸ್ತಿಗಳ ಸಮರ್ಥ ನಿರ್ವಹಣೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
2025ರ ಜೂನ್‌ನಲ್ಲಿ ಉಮೀದ್ ಪೋರ್ಟಲ್ ಅನ್ನು ಪ್ರಾರಂಭಿಸಿದಾಗಿನಿಂದ ದೇಶಾದ್ಯಂತ ವಕ್ಫ್ ಮಂಡಳಿಗಳು ಎಲ್ಲಾ ವಕ್ಫ್ ಆಸ್ತಿ ವಿವರಗಳನ್ನು ಆರು ತಿಂಗಳೊಳಗೆ ಅಪ್ಲೋಡ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಸಭೆಯಲ್ಲಿ ಡೇಟಾ ಅಪ್ಲೋಡ್‌ಗಳ ಪ್ರಸ್ತುತ ಸ್ಥಿತಿ, ಅನುಷ್ಠಾನದ ಸವಾಲುಗಳು ಮತ್ತು ಪರಿಹಾರ ಹಾಗೂ ವಕ್ಫ್ ಸಂಸ್ಥೆಗಳನ್ನು ಮತ್ತಷ್ಟು ಸಬಲೀಕರಣಗೊಳಿಸುವ ಕಾರ್ಯತಂತ್ರಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ವಕ್ಭ್ ಬೋರ್ಡ್ ಅಧ್ಯಕ್ಷ ಸಯ್ಯದ್ ಮುಹಮದ್ ಅಲಿ ಅಲ್ ಹುಸೇನಿ, ಉಮೀದ್ ಪೋರ್ಟಲ್ ನಿರ್ವಹಣೆಯಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತಿದ್ದು, ಪರಿಹಾರಕ್ಕಾಗಿ ಕೇಂದ್ರ ಸಕಾರದಕ್ಕೆ ಮನವಿ ಮಾಡಿದ್ದೇವೆ. ಇದು ದೊಡ್ಡ ಸಮಸ್ಯೆ ಅಲ್ಲ. ಹೀಗಾಗಿ ಶೀಘ್ರದಲ್ಲೇ ಪೋರ್ಟಲ್ ನಿರ್ವಹಣೆ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಇದೆ ಎಂದರು.