ಹೊಸದಿಗಂತ ವರದಿ, ಉಳ್ಳಾಲ:
ಹಸುಗಳ ಸಂತತಿಯನ್ನು ಉಳಿಸುವುದೇ ಇಂದು ದೊಡ್ಡ ಸವಾಲಾಗಿ ಪರಿಣಮಿಸಿದ್ದು ಗೋರಕ್ಷಣೆಗೆ ಜನಸಾಮಾನ್ಯರು ಕೂಡಾ ತಮ್ಮ ,ತಮ್ಮ ಕೊಡುಗೆ ಮತ್ತು ಸೇವೆಯನ್ನ ನೀಡುವ ನಿಟ್ಟಿನಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಯವರ ಮಾರ್ಗದರ್ಶನದಲ್ಲಿ ಕೈರಂಗಳ ಗ್ರಾಮದ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ ಗೋಸೇವಾ ಮಾಸಾಚರಣೆಗೆ ಚಾಲನೆ ದೊರೆಯಿತು.
ಬುಧವಾರ ಸಂಜೆ ಗೋಧೋಳಿ ಲಗ್ನದಲ್ಲಿ ಭಜನಾ ಸಂಕೀರ್ತನಕಾರರು ಹಾಗೂ ತರಬೇತುದಾರರಾದ ದೀನ್ ರಾಜ್ ಕಳವಾರು ಅವರು ಗೋಸೇವಾ ಮಾಸಾಚರಣೆಯನ್ನು ಉದ್ಘಾಟಿಸಿದರು.

ಅಮೃತಧಾರಾ ಗೋಶಾಲೆಯ ಸಂಚಾಲಕರಾದ ಟಿ.ಜಿ. ರಾಜಾರಾಮ್ ಭಟ್ ಮಾತನಾಡಿ, ಕಳೆದ ಮೂರು ವರ್ಷಗಳ ಗೋಮಾಸಾಚರಣೆಯ ಯಶಸ್ಸು ನಾಲ್ಕನೇ ವರ್ಷದ ತುಡಿತಕ್ಕೆ ಕಾರಣವಾಗಿದೆ.ಮಕರ ಸಂಕ್ರಮಣದಿಂದ ಕುಂಭ ಸಂಕ್ರಮಣದವರೆಗೆ ಒಂದು ತಿಂಗಳ ಕಾಲ ಗೋಮಾಸಾಚರಣೆ ಆಚರಿಸಲ್ಪಡುತ್ತದೆ.ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಸಹ ಇಲ್ಲಿಗೆ ಬಂದು ಸಂಭ್ರಮಿಸುವುದರ ಜೊತೆಗೆ ಗೋವುಗಳ ಸೇವೆಗೈದು ಕೃತಾರ್ಥರಾಗುತ್ತಾರೆ.ಗೋಮಾಸಾಚರಣೆ ಪ್ರಯುಕ್ತ ಶುದ್ಧ ಭಾರತೀಯ ಶೈಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.ರಕ್ತ ಮತ್ತು ಹಣ ನಿಂತಲ್ಲೆ ನಿಲ್ಲದೆ ನಿರಂತರವಾಗಿ ಚಲನೆಯಲ್ಲಿರಬೇಕು.ಕೂಡಿಟ್ಟ ಧನವನ್ನು ಇಂತಹ ಅರ್ಥಪೂರ್ಣ ಕಾರ್ಯಗಳಿಗೆ ವಿನಿಯೋಗಿಸಬೇಕು.ಧನ ಸಹಾಯ ಮಾಡಿ ಅಂತ ನಾವು ಯಾರಲ್ಲೂ ಕೇಳಲ್ಲ,ಸಾಧ್ಯವಾದಲ್ಲಿ ಹಸುಗಳಿಗೆ ಸಹಾಯ ಮಾಡುವವರನ್ನ ಇಲ್ಲಿಗೆ ಕರೆತನ್ನಿ.ಆರಂಭದಲ್ಲಿ ಈ ಪ್ರದೇಶದಲ್ಲಿ ಮಲೆನಾಡು ಗಿಡ್ಡ ತಳಿ ಹಸುಗಳ ಪಾಲನಾ ಕೇಂದ್ರವನ್ನು ಆರಂಭಿಸಿದ್ದೆವು.ನಂತರದ ದಿನಗಳಲ್ಲಿ ಪೊಲೀಸರು ಕಟುಕರಿಂದ ವಶಪಡಿಸಿದ ಹಸುಗಳನ್ನ ತಂದು ಬಿಟ್ಟ ಪರಿಣಾಮ ಗೋಶಾಲೆ ವಿಸ್ತಾರಗೊಂಡು ಇಂದು ವಿವಿಧ ತಳಿಗಳ ಹಸುಗಳು ಇಲ್ಲಿ ಆಶ್ರಯ ಪಡೆದಿವೆಯೆಂದರು.

ಕಣಂತೂರು ಕ್ಷೇತ್ರದ ಆಡಳಿತ ಮೊಕ್ತೇಸರರಾದ ದೇವಿಪ್ರಸಾದ್ ಪೊಯ್ಯತ್ತಾಯ ಮಾತನಾಡಿ ಗೋಮಾಸಾಚರಣೆಯು ಒಂದು ವಿಭಿನ್ನ ಪರಿಕಲ್ಪನೆಯಾಗಿದ್ದು ಆ ಮೂಲಕ ನಾವೂ ಕೂಡ ಗೋವುಗಳ ಸೇವೆಗೈಯಲು ಅವಕಾಶ ಸಿಕ್ಕಿದಂತಾಗಿದೆ.ಗೋವುಗಳೆಂದರೆ ನಮ್ಮಲ್ಲೀಗ ತಾತ್ಸಾರ ಮನೋಭಾವ ಉಂಟಾಗಿದೆ.ಹಿಂದೆ ಪ್ರತಿಯೊಬ್ಬರ ಮನೆಯಲ್ಲೂ ದನಗಳಿತ್ತು,ಅವ್ಗಳ ಪೋಷಣೆ ಕಷ್ಟವೆಂದು ನಾವು ಗೋಸಾಕಣೆಯಿಂದ ವಿಮುಖರಾಗುತ್ತ ಬಂದಿದ್ದೇವೆ.ಇಂತಹ ಜನ ಜಾಗೃತಿ ಕಾರ್ಯಕ್ರಮಗಳಿಂದ ಮಕ್ಕಳಲ್ಲಾದರೂ ಗೋಸಾಕಣೆಯ ಬಗೆಗಿನ ಕಾಳಜಿ ಮೂಡುವಂತಾಗುತ್ತದೆಯೆಂದರು.
ಇನೋಳಿ ಶ್ರೀ ಸೋಮನಾಥ ದುರ್ಗಾಪರಮೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಕಿಲ್ಲೂರುಗುತ್ತು ಚಂದ್ರಹಾಸ ಪೂಂಜಾ,ಕಣಂತೂರು ಕ್ಷೇತ್ರದ ಆನುವಂಶಿಕ ಮೊಕ್ತೇಸರರಾದ ಪದ್ಮನಾಭ ರೈ ಯಾನೆ ಮಂಜು ಭಂಡಾರಿ ನಾರ್ಯಗುತ್ತು,ಕೂಟತ್ತಜೆ ಉಳ್ಳಾಲ್ತಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಶೈಲೇಂದ್ರ ಭರತ್ ನಾಯ್ಕ್ ನಚ್ಚ ಮೊದಲಾದವರು ಉಪಸ್ಥಿತರಿದ್ದರು.


