ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕನೇ ದಿನದ ಸಮಾಧಿ ಅಗೆಯುವ ಪ್ರಕ್ರಿಯೆ ನಡೆಯುತ್ತಿದ್ದು, ಸಹಾಯಕ ಆಯುಕ್ತರು ಅನುಮತಿ ನೀಡಿದಲ್ಲಿ ರಾತ್ರಿಯೂ ತನಿಖೆ ಮುಂದುವರಿಯುವ ಸಾಧ್ಯತೆ ಕಂಡುಬಂದಿದೆ.
ಅನಾಮಿಕ ವ್ಯಕ್ತಿ ನೀಡಿದ ಮಾಹಿತಿಯಂತೆ ಗುರುವಾರ ಪಾಯಿಂಟ್ ನಂ. 6 ರಲ್ಲಿ ಅಗೆತ ನಡೆಸಲಾಗಿತ್ತು. ಈ ವೇಳೆ ಸುಮಾರು 12 ಮೂಳೆಗಳು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಎಸ್ ಐಟಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಪ್ರತೀ ಹಂತವನ್ನು ಎಸ್ಐಟಿ ತಂಡ ದೃಶ್ಯ ಹಾಗೂ ಛಾಯಾಚಿತ್ರದ ಮೂಲಕ ದಾಖಲಿಸಿದ್ದು, ಸ್ಥಳದ ವಿವರ, ಎಷ್ಟು ಎಲುಬುಗಳು ಪತ್ತೆಯಾದವು, ಅವು ಹೇಗೆ ಲಭಿಸಿವೆ ಎಂಬ ಮಾಹಿತಿ ದಾಖಲಾತಿಯಲ್ಲಿ ಸೇರಿಸಲಾಗಿದೆ. ಪತ್ತೆಯಾದ ಎಲ್ಲ ಅವಶೇಷಗಳನ್ನು ಮುಂದಿನ ವಿಧಾನ ವಿಜ್ಞಾನ (FSL) ಪರಿಶೀಲನೆಗಾಗಿ ಎಫ್ಎಸ್ಎಲ್ ತಂಡ ಸಂಗ್ರಹಿಸಿ ಕೊಂಡೊಯ್ಯುತ್ತಿದೆ. ಇದೀಗ ಅಂತಿಮ ದೃಢೀಕರಣಕ್ಕಾಗಿ ವೈದ್ಯಕೀಯ ಮತ್ತು ಡಿಎನ್‌ಎ ಪರೀಕ್ಷೆಗಳಿಗೂ ನಿರೀಕ್ಷೆ ಇದೆ.