ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದಲ್ಲಿ ಕಿರುತೆರೆಯ ನಟ, ನಟಿಯರೂ ಸೇರಿ 139 ಸದಸ್ಯರಿಗೆ ಸೈಟ್ ಕೊಡಿಸುವುದಾಗಿ ಹೇಳಿ ಲಕ್ಷ ಲಕ್ಷ ಹಣ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಬಿಲ್ಡರ್ ಭಗೀರಥ್, ಸಂಜೀವ್ ತಗಡೂರು, ಗುರುಪ್ರಸಾದ್, ರವೀಂದ್ರ ಮತ್ತು ಉಮಾಕಾಂತ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್‌ನ 139 ಸದಸ್ಯರನ್ನು ಈ ವಂಚಕರು ಗುರಿಯಾಗಿಸಿದ್ದರು. ಸಂಸ್ಥೆಯ ಸದಸ್ಯೆ ಭಾವನಾ ಬೆಳಗೆರೆ ಕೂಡ ಈ ಮೋಸದ ಜಾಲಕ್ಕೆ ಸಿಲುಕಿದ್ದು, ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಸೈಟ್ ಕಮಿಟಿ ಸದಸ್ಯರಾದ ಸಂಜೀವ್ ತಗಡೂರು ಮತ್ತು ಬಿಲ್ಡರ್ ಭಗೀರಥ್ ಅವರು ತಾವರೆಕೆರೆ ಪ್ರದೇಶದಲ್ಲಿ ಸೈಟ್ ಕೊಡುತ್ತೇವೆ ಎಂದು ಹೇಳಿದ್ದರು. ಬಳಿಕ ಸದಸ್ಯರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ, ನಕಲಿ ದಾಖಲೆಗಳನ್ನು ತಯಾರಿಸಿದ್ದರು. ಆದರೆ ಖಾತೆ ಮಾಡಿಸುವ ವೇಳೆ ನಕಲಿ ದಾಖಲೆಗಳು ಬೆಳಕಿಗೆ ಬಂದು ವಂಚನೆ ಬಯಲಾಗಿದೆ.
ಅಸೋಸಿಯೇಷನ್ ಸದಸ್ಯರ ಪ್ರಕಾರ ಒಟ್ಟು 1.6 ಕೋಟಿ ರೂಪಾಯಿ ವಂಚನೆ ಆಗಿದ್ದು, ಪ್ರಕರಣದ ತನಿಖೆ ಇನ್ನೂ ಮುಂದುವರೆಯುತ್ತಿದೆ.