ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನೇಕಲ್ ತಾಲೂಕಿನ ಗುಂಜೂರು ರಸ್ತೆಯಲ್ಲಿರುವ ಯುರೋ ಶಾಲೆಗೆ ಮಗಳನ್ನು ಸೇರಿಸಲು ಯತ್ನಿಸಿದ ಪೋಷಕರು ಸೀಟು ಬ್ಲಾಕಿಂಗ್ ಮಾಡಲು 26,000 ರೂ. ಪಾವತಿಸಿದ ನಂತರ ಶಾಲಾ ಆಡಳಿತ ಮಂಡಳಿಯಿಂದ ವಂಚಿಸಿರುವುದಾಗಿ ಆರೋಪಿಸಿದ್ದಾರೆ.
ಶಾಲೆಗೆ ಕಟ್ಟಡ ನಿರ್ಮಿಸಲು ಶಿಕ್ಷಣ ಇಲಾಖೆ ಅನುಮತಿ ನೀಡಿಲ್ಲ ಎಂಬುದು ಕೆಲ ದಿನಗಳ ಬಳಿಕ ಗೊತ್ತಾಯಿತು ಎಂದು ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಂತರ ಪೋಷಕರು ಯುರೋ ಸ್ಕೂಲ್ ವಿರುದ್ಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕ್ಯಾಂಪಸ್ ನಿರ್ಮಾಣ ಹಂತದಲ್ಲಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿಕೊಂಡು ವಂಚನೆ ಮಾಡಿರುವುದಾಗಿ ಅವರು ಆರೋಪಿಸಿದ್ದಾರೆ.
ಯುರೋ ಶಾಲೆಯು ಪ್ರಸಿದ್ಧ ಬ್ರಾಂಡ್ ಆಗಿರುವುದಾಗಿ ನಂಬಿಕೆ ಇಟ್ಟಿದ್ದೇವು. ಹಾಗಾಗೀ ಅದರ ಹಿನ್ನೆಲೆ ವಿಚಾರಿಸಲಿಲ್ಲ. ನಮ್ಮ ಮಗಳಿಗಾಗಿ ಸೀಟ್ ಬ್ಲಾಕಿಂಗ್ ಮಾಡಿದ್ದೇವು. ನನ್ನ ಮಗು 2 ನೇ ತರಗತಿಯಲ್ಲಿದ್ದು, 2025 ರ ನವೆಂಬರ್‌ನಲ್ಲಿ 26,000 ರೂ. ಪಾವತಿಸಿದ್ದೇವೆ. ಆದರೆ, ಇದುವರೆಗೆ ಶಾಲಾ ಆಡಳಿತ ಮಂಡಳಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿಲ್ಲ ಎಂದು ಅಧಿಕಾರಿಗಳಿಂದ ತಿಳಿದು ಬಂದಿದೆ ಎಂದು ಪೋಷಕರು ಹೇಳಿಕೊಂಡಿದ್ದಾರೆ.

