ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಸೈಬರ್ ಕ್ರೈಮ್‌ಗಳಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸೈಬರ್ ಕ್ರೈಂನ್ನೇ ಉದ್ಯೋಗ ಮಾಡಿಕೊಂಡವರ ಚಾಣಾಕ್ಷತೆಗೆ ಮುಗ್ಧರ ಹಣ ಖಾಲಿಯಾಗುತ್ತಿದೆ. ಕಳೆದ ಆರು ವರ್ಷದಲ್ಲಿ 52,976 ಕೋಟಿ ರೂಪಾಯಿಗೂ ಅಧಿಕ ವಂಚನೆಯಾಗಿದೆ. ಸೈಬರ್ ಕ್ರೈಂ ವಂಚನೆಯಲ್ಲಿ ನಮ್ಮ ರಾಜ್ಯವೂ ಕುಖ್ಯಾತಿ ಪಡೆದಿದೆ. ದೇಶದಲ್ಲೇ ಕರ್ನಾಟಕಕ್ಕೆ ಎರಡನೇ ಸ್ಥಾನ ಸಿಕ್ಕಿದೆ!
ಭಾರತದಲ್ಲಿ ಸೈಬರ್ ಅಪರಾಧ ಮತ್ತು ವಂಚನೆ ಪ್ರಕರಣಗಳು ಆತಂಕಕಾರಿ ದರದಲ್ಲಿ ಏರಿಕೆಯಾಗಿವೆ. ದೇಶದಲ್ಲಿ ಕಳೆದ ಆರು ವರ್ಷಗಳಲ್ಲಿ ಡಿಜಿಟಲ್ ಅರೆಸ್ಟ್, ಆನ್‌ಲೈನ್, ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಸೇರಿ 52,976 ಕೋಟಿ ರೂ.ಗೂ ಹೆಚ್ಚು ಹಣ ವಂಚನೆಯಾಗಿದೆ ಎಂದು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ಮಾಹಿತಿ ನೀಡಿದೆ.
ಇದನ್ನೂ ಓದಿ: ಹಳಿ ಏರಲು ಭಾರತದ ಮೊದಲ ಹೈಡ್ರೋಜನ್ ರೈಲು ಸಜ್ಜು: ಯಾವಾಗ? ಏನಿದರ ವಿಶೇಷತೆಗಳು?
ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್‌ನ ದತ್ತಾಂಶದ ಪ್ರಕಾರ, 2025ರ ಒಂದೇ ವರ್ಷದಲ್ಲಿ ಜನರು ಸುಮಾರು 19,812.96 ಕೋಟಿ ರೂ. ಕಳೆದುಕೊಂಡಿದ್ದಾರೆ. 21.7 ಲಕ್ಷಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ. ಇದಕ್ಕೂ ಮುನ್ನ 2024ರಲ್ಲಿ ಜನರು 22,849.49 ಕೋಟಿ ರೂ. ನಷ್ಟವಾಗಿ, 19.1 ಲಕ್ಷ ದೂರುಗಳು ದಾಖಲಾಗಿದ್ದವು. 2023ರಲ್ಲಿ 13.10 ಲಕ್ಷ ದೂರುಗಳು ಹಾಗೂ 7,463.2 ಕೋಟಿ ರೂ. ನಷ್ಟವಾಗಿತ್ತು. 2022ರಲ್ಲಿ 2,290.23 ಕೋಟಿ ರೂ. ನಷ್ಟ ಮತ್ತು 6.94 ಲಕ್ಷ ದೂರುಗಳು, 2021ರಲ್ಲಿ 551.65 ಕೋಟಿ ರೂ. ನಷ್ಟ ಹಾಗೂ 2020ರಲ್ಲಿ 8.56 ಕೋಟಿ ರೂ. ಕಳೆದುಕೊಂಡಿದ್ದರು ಎಂದು ತಿಳಿಸಿದೆ.
ರಾಜ್ಯವಾರು ವಿಶ್ಲೇಷಣೆಯಲ್ಲಿ, ಮಹಾರಾಷ್ಟ್ರವು ಸೈಬರ್ ವಂಚನೆಗಳಿಂದ ಹೆಚ್ಚು ಪರಿಣಾಮ ಬೀರಿದೆ. ರಾಜ್ಯದಲ್ಲಿ 3,203 ಕೋಟಿ ರೂ. ನಷ್ಟವಾಗಿದ್ದು, 28.3 ಲಕ್ಷ ದೂರುಗಳು ದಾಖಲಾಗಿವೆ. ಇನ್ನೂ ಕರ್ನಾಟಕದಲ್ಲಿ 2,413 ಕೋಟಿ ರೂ. ವಂಚನೆಯಾಗಿದ್ದು, 21.3 ಲಕ್ಷ ದೂರುಗಳು ದಾಖಲಾಗಿವೆ. ತಮಿಳುನಾಡು 1,897 ಕೋಟಿ ರೂ. ವಂಚನೆ ಹಾಗೂ 12.32 ಲಕ್ಷ ದೂರುಗಳು, ಉತ್ತರ ಪ್ರದೇಶದಲ್ಲಿ 1,443 ಕೋಟಿ ರೂ. ವಂಚನೆ ಹಾಗೂ 27.52 ಲಕ್ಷ ದೂರುಗಳು, ತೆಲಂಗಾಣದಲ್ಲಿ 1,372 ಕೋಟಿ ರೂ. ನಷ್ಟ ಹಾಗೂ 95,000 ದೂರುಗಳು ದಾಖಲಾಗಿವೆ ಎಂದು ತಿಳಿದುಬಂದಿವೆ.
ಇದನ್ನೂ ಓದಿ: ರಾಜ್ಯದ ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ಹುಲಿ ಗಣತಿ ಆರಂಭ
ದೇಶದ ಒಟ್ಟು ಸೈಬರ್ ವಂಚನೆ ಪ್ರಕರಣಗಳಲ್ಲಿ ಕಳೆದುಕೊಂಡ ಹಣದ ಪೈಕಿ ಅರ್ಧಕ್ಕಿಂತ ಹೆಚ್ಚು ನಷ್ಟ ಈ ಐದು ರಾಜ್ಯಗಳಲ್ಲಿ ಸಂಭವಿಸಿದೆ. ಇದರ ಹೊರತಾಗಿ ಗುಜರಾತ್‌ನಲ್ಲಿ 1,312.26 ಕೋಟಿ ರೂ., ದೆಹಲಿಯಲ್ಲಿ 1,163 ಕೋಟಿ ರೂ., ಪಶ್ಚಿಮ ಬಂಗಾಳದಲ್ಲಿ 1,073.98 ಕೋಟಿ ರೂ., ಮಣಿಪುರದಲ್ಲಿ 16.74 ಕೋಟಿ ರೂ. ನಷ್ಟವಾಗಿದೆ.

