ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಡಿದ ನಶೆಯಲ್ಲಿ ಗೆಳೆಯರ ನಡುವೆ ನಡೆದ ಸಣ್ಣ ಕಿರಿಕ್, ಭೀಕರ ರಸ್ತೆ ಅಪಘಾತಕ್ಕೆ ದಾರಿಯಾದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಮೃತಪಟ್ಟಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.
ಹೆಬ್ಬಗೋಡಿಯ ನಿವಾಸಿ ಪ್ರಶಾಂತ್ (28) ಮೃತ ದುರ್ದೈವಿ. ಭಾನುವಾರ ಕ್ರಿಕೆಟ್ ಪಂದ್ಯ ಮುಗಿಸಿದ್ದ ಪ್ರಶಾಂತ್ ಮತ್ತು ರೋಷನ್ ಹೆಗ್ಗಡೆ (27), ಸಂಜೆ ಮದ್ಯದ ಪಾರ್ಟಿ ಮಾಡಿದ್ದರು. ಈ ವೇಳೆ ಇಬ್ಬರ ನಡುವೆ ಸಣ್ಣ ಮಾತಿನ ಚಕಮಕಿ ನಡೆದಿದೆ. ಮದ್ಯದ ಅಮಲಿನಲ್ಲಿ ಮನೆಗೆ ಮರಳುವಾಗಲೂ ಕಾರಿನಲ್ಲಿ ಜಗಳ ಮುಂದುವರಿದಿದೆ ಎನ್ನಲಾಗಿದೆ.
ಕಾರು ಚಲಾಯಿಸುತ್ತಿದ್ದ ರೋಷನ್‌ನನ್ನು ಪ್ರಶಾಂತ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ರೋಷನ್, ಆವೇಶದಲ್ಲಿ ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿದ್ದಾನೆ. ಈ ರಭಸಕ್ಕೆ ಕಮ್ಮಸಂದ್ರದ ಬಳಿ ಕಾರು ರಸ್ತೆ ಪಕ್ಕದ ಮರಕ್ಕೆ ಬಲವಾಗಿ ಅಪ್ಪಳಿಸಿದೆ.
ಅಪಘಾತದ ತೀವ್ರತೆಗೆ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಪ್ರಶಾಂತ್ ಕೊನೆಯುಸಿರೆಳೆದಿದ್ದಾರೆ. ಸದ್ಯ ರೋಷನ್ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.




