ಹೊಸದಿಗಂತ ಡಿಜಿಟಲ್ ಡೆಸ್ಕ್:
“ನಾವು ಸಂವಿಧಾನವನ್ನು ರಕ್ಷಿಸಿದರೆ, ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ. ಸಂವಿಧಾನವನ್ನು ದುರ್ಬಲಗೊಳಿಸುವುದು ಸಮಾಜಕ್ಕೆ ವಿಷ ಉಣಿಸುವ ಸಂಚಿಗೆ ಸಮಾನ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಸಿದ್ದಾರೆ.
ನಗರದ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ನಡೆದ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ನಾಡಿನ ಜನತೆಯನ್ನುದ್ದೇಶಿಸಿ ಅವರು ಮಾತನಾಡಿದರು. ಭಾರತೀಯ ಸಂವಿಧಾನ ಜಾರಿಗೆ ಬಂದು 76 ವರ್ಷಗಳು ಪೂರ್ಣಗೊಂಡಿರುವ ಈ ಐತಿಹಾಸಿಕ ಸಂದರ್ಭದಲ್ಲಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವಂತೆ ಅವರು ಕರೆ ನೀಡಿದರು.
ಭಾರತದ ಪ್ರಜಾಪ್ರಭುತ್ವಕ್ಕೆ 800 ವರ್ಷಗಳ ಹಿಂದೆಯೇ ಬಸವಣ್ಣನವರು ‘ಅನುಭವ ಮಂಟಪ’ದ ಮೂಲಕ ನಾಂದಿ ಹಾಡಿದ್ದರು. ಶೂದ್ರರು ಮತ್ತು ಮಹಿಳೆಯರನ್ನೂ ಒಳಗೊಂಡಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಲ್ಲಿ ಸಮಾನ ಅವಕಾಶವಿತ್ತು. ಇದುವೇ ಇಂದಿನ ಸಂಸದೀಯ ವ್ಯವಸ್ಥೆಗೆ ಮಾದರಿ ಎಂದು ಸಿಎಂ ಸ್ಮರಿಸಿದರು.
ಅಂಬೇಡ್ಕರ್ ಅವರ ಸಂವಿಧಾನ ಜಾರಿಗೆ ಬರುವ ಮುನ್ನ ದೇಶದಲ್ಲಿ ಲಿಂಗ ಮತ್ತು ಜಾತಿ ತಾರತಮ್ಯದ ‘ಅಲಿಖಿತ ಸಂವಿಧಾನ’ ಅಸ್ತಿತ್ವದಲ್ಲಿತ್ತು. ಅದು ಮಹಿಳೆಯರು ಮತ್ತು ದಲಿತರನ್ನು ಜ್ಞಾನ ಮತ್ತು ಘನತೆಯಿಂದ ವಂಚಿಸಿತ್ತು. ಬಾಬಾ ಸಾಹೇಬ್ ಅವರು ಆ ಮನುಷ್ಯ ವಿರೋಧಿ ವ್ಯವಸ್ಥೆಯನ್ನು ತೊಡೆದುಹಾಕಿ ಸಮಾನತೆಯ ಸಂವಿಧಾನ ನೀಡಿದರು ಎಂದು ಅವರು ವಿವರಿಸಿದರು.
ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ದೇಶದ ಸುಭದ್ರತೆಗಾಗಿ ನಾವೆಲ್ಲರೂ ಸಂವಿಧಾನ ರಕ್ಷಣೆಯ ಪ್ರತಿಜ್ಞೆ ಮಾಡಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.




