ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಇನ್ಮುಂದೆ 525 ಅಂಕ ನೀಡುವ ನಿಯಮ ಸಂಬಂಧ ಶಿಕ್ಷಣ ಇಲಾಖೆ ಕರಡು ಅಧಿಸೂಚನೆ ಹೊರಡಿಸಿದೆ. ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳು ಹಾಗೂ ಸಲಹೆಗಳನ್ನು ಸಲ್ಲಿಸಲು 7 ದಿನಗಳ ಕಾಲಾವಕಾಶ ನೀಡಲಾಗಿದೆ.
ಈ ಹಿಂದೆ ಎಸ್ಎಸ್ಎಲ್ಸಿ ಪರೀಕ್ಷೆಯನ್ನು 625 ಅಂಕಗಳಿಗೆ ನಡೆಸಲಾಗುತ್ತಿತ್ತು. ಇದೀಗ ತೃತೀಯ ಭಾಷೆಗೆ ನೀಡಲಾಗುತ್ತಿದ್ದ 100 ಅಂಕಗಳನ್ನು ಗ್ರೇಡ್ ಆಗಿ ಬದಲಾಯಿಸಲಾಗಿದ್ದು, ಹೀಗಾಗಿ ಇನ್ಮುಂದೆ ಒಟ್ಟು 525 ಅಂಕಗಳಲ್ಲಿ ಪರೀಕ್ಷೆ ನಡೆಯಲಿದೆ.
ಈ ನಿಯಮದ ಪ್ರಕಾರ ವಿದ್ಯಾರ್ಥಿಗಳು ಉತ್ತೀರ್ಣರಾಗಲು 525 ಅಂಕಗಳಲ್ಲಿ ಕನಿಷ್ಠ 173 ಅಂಕಗಳನ್ನು ಗಳಿಸಬೇಕು. ಜೊತೆಗೆ ಪ್ರತಿಯೊಂದು ವಿಷಯದಲ್ಲೂ ಶೇ.30ರಷ್ಟು ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ.
ತೃತೀಯ ಭಾಷೆಯ ಪರೀಕ್ಷೆಯಲ್ಲಿ ಗ್ರೇಡ್ ನೀಡಲಾಗುತ್ತದೆ. 80-100 ಅಂಕ ಗಳಿಸಿದರೆ A ಗ್ರೇಡ್, 50-79 ಅಂಕಕ್ಕೆ B ಗ್ರೇಡ್ ಮತ್ತು 49 ಅಂಕಕ್ಕೆ C ಗ್ರೇಡ್ ಎಂದು ನೀಡಲಾಗುವುದು.
2026ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಿಂದಲೇ ಈ ನಿಯಮ ಜಾರಿಗೆ ಬರಲಿದ್ದು, ಕರಡು ಅಧಿಸೂಚನೆಗೆ ಸಾರ್ವಜನಿಕರಿಂದ ಬಂದ ಪ್ರತಿಕ್ರಿಯೆಗಳ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.



