March 17, 2026
Tuesday, March 17, 2026
spot_img

ಇನ್ಮುಂದೆ ಜೈಲು ಅಧೀಕ್ಷಕರು ಮನಸ್ಸು ಮಾಡಿದರೆ ಮಾತ್ರ ದರ್ಶನ್ ಗೆ ಫ್ಯಾಮಿಲಿ ಮೀಟಿಂಗ್ ಭಾಗ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರಿಗೆ ತಮ್ಮ ಕುಟುಂಬಸ್ಥರನ್ನು ಖುದ್ದಾಗಿ ಭೇಟಿಯಾಗಲು 57ನೇ ಸೆಷನ್ಸ್ ನ್ಯಾಯಾಲಯವು ತಾತ್ವಿಕವಾಗಿ ಸಮ್ಮತಿ ಸೂಚಿಸಿದೆ. ಆದರೆ, ಈ ಭೇಟಿಯ ಭಾಗ್ಯ ಸಿಗುತ್ತದೆಯೇ ಇಲ್ಲವೇ ಎಂಬುದು ಈಗ ಸಂಪೂರ್ಣವಾಗಿ ಪರಪ್ಪನ ಅಗ್ರಹಾರ ಜೈಲಿನ ಅಧೀಕ್ಷಕರ ಕೈಯಲ್ಲಿದೆ.

ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಾಲಯವು, ಜೈಲು ಮ್ಯಾನ್ಯುಯಲ್ ನಿಯಮಾವಳಿಗಳ ಅನ್ವಯ ಸಂದರ್ಶನಕ್ಕೆ ಅವಕಾಶವಿದ್ದರೆ ಮಾತ್ರ ಅದನ್ನು ಪರಿಗಣಿಸುವಂತೆ ಸೂಚಿಸಿದೆ. ಒಂದು ವೇಳೆ ಜೈಲಿನ ನಿಯಮಗಳು ಇದಕ್ಕೆ ಪೂರಕವಾಗಿದ್ದರೆ, ದರ್ಶನ್ ಕುಟುಂಬದವರು ಜೈಲಿನ ಒಳಗೆ ಹೋಗಿ ಅವರನ್ನು ಭೇಟಿ ಮಾಡಬಹುದಾಗಿದೆ.

ಕೋರ್ಟ್ ಅನುಮತಿ ನೀಡಿದ್ದರೂ, ಅಂತಿಮ ತೀರ್ಮಾನದ ಚೆಂಡು ಈಗ ಜೈಲು ಅಧಿಕಾರಿಗಳ ಅಂಗಳದಲ್ಲಿದೆ. ಒಂದು ವೇಳೆ ಭದ್ರತೆ ಅಥವಾ ನಿಯಮಗಳ ಹಿನ್ನೆಲೆಯಲ್ಲಿ ಅಧೀಕ್ಷಕರು ಈ ಮನವಿಯನ್ನು ತಿರಸ್ಕರಿಸಿದರೆ, ದರ್ಶನ್‌ಗೆ ಒಳಸಂದರ್ಶನದ ಅವಕಾಶ ಕೈತಪ್ಪಲಿದೆ. ಜೈಲು ನಿಯಮಗಳ ಪ್ರಕಾರ ಅಧೀಕ್ಷಕರು ನೀಡುವ ವರದಿಯೇ ಈ ಭೇಟಿಯ ಭವಿಷ್ಯವನ್ನು ನಿರ್ಧರಿಸಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !