ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದ ಬಲೋಡಾ ಬಜಾರ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಿಯಲ್ ಇಸ್ಪಾಟ್ ಸ್ಟೀಲ್ ಪ್ಲಾಂಟ್‌ನ ಕಲ್ಲಿದ್ದಲು ಕುಲುಮೆ ಏಕಾಏಕಿ ಸ್ಫೋಟಗೊಂಡ ಪರಿಣಾಮ ಕನಿಷ್ಠ ಏಳು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆ ಸಂಭವಿಸಿದ ವೇಳೆ ಕಾರ್ಖಾನೆಯ ಕುಲುಮೆ ಸುತ್ತಮುತ್ತ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅಚಾನಕ್ ಉಂಟಾದ ಸ್ಫೋಟದಿಂದಾಗಿ ಉರಿಯುವ ಕಲ್ಲಿದ್ದಲು ಮತ್ತು ತೀವ್ರ ಶಾಖದ ನಡುವೆ ಸಿಲುಕಿದ ಕಾರ್ಮಿಕರು ಭಾರೀ ಸುಟ್ಟ ಗಾಯಗಳಿಗೆ ಒಳಗಾದರು. ಕೆಲವರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೂ ಕೆಲವರಿಗೆ ಗಂಭೀರ ಗಾಯಗಳಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡ ಕಾರ್ಮಿಕರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಆದರೆ ಗಾಯಾಳುಗಳ ನಿಖರ ಸಂಖ್ಯೆಯ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಈ ಘಟನೆಗೆ ಸಂಬಂಧಿಸಿ ಕಾರ್ಖಾನೆ ಆಡಳಿತದಿಂದ ಇನ್ನೂ ಸ್ಪಷ್ಟನೆ ಹೊರಬಿದ್ದಿಲ್ಲ.


