ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಕ್ಷಣಾ ವಲಯದಲ್ಲಿ ಭಾರತ ಬಲ ತುಂಬಲು ದೇಶೀಯ ನಿರ್ಮಿತ ತೇಜಸ್ ಎಂಕೆ1ಎ ಲಘು ಯುದ್ಧ ವಿಮಾನ ಎಂಟ್ರಿಕೊಡುತ್ತಿದ್ದು, ಶುಕ್ರವಾರ (ಅ. 17) ಮಹಾರಾಷ್ಟ್ರದ ನಾಸಿಕ್‌ನಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಲಾಯಿತು.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. ನಿರ್ಮಿಸಿರುವ ಈ ದೇಸಿ ಲಘು ಯುದ್ಧ ವಿಮಾನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ಮೊದಲ ಬಾರಿಗೆ ಹಾರಾಟ ನಡೆಸಿತು. ಭಾರತದ ರಕ್ಷಣಾ ಕ್ಷೇತ್ರದಲ್ಲಿ ಇದನ್ನು ಪ್ರಮುಖ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.
ಮಿಗ್-21 ಜೆಟ್‌ಗಳ ಎರಡು ಸ್ಕ್ವಾಡ್ರನ್‌ಗಳನ್ನು ಹಿಂತೆಗೆದುಕೊಂಡ ವಾರಗಳ ನಂತರ ಈ ಹಾರಾಟ ನಡೆಸಲಾಯಿತು. ಇದು ರಕ್ಷಣಾ ಉತ್ಪಾದನೆಯಲ್ಲಿ ಭಾರತದ ಸ್ವಾವಲಂಬನೆಯನ್ನು ಬಲಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಭಾರತೀಯ ವಾಯುಪಡೆ (IAF) ಈ ಹಿಂದೆ 40 ತೇಜಸ್ ವಿಮಾನಗಳಿಗೆ ಆರ್ಡರ್ ಮಾಡಿತ್ತು, ಅದರಲ್ಲಿ ಎರಡು ಸ್ಕ್ವಾಡ್ರನ್‌ಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. 2021ರಲ್ಲಿ ರಕ್ಷಣಾ ಸಚಿವಾಲಯವು 83 Mk1A ಜೆಟ್‌ಗಳಿಗೆ ಆರ್ಡರ್ ನೀಡಿತ್ತು. ಶುಕ್ರವಾರದ ಹಾರಾಟದೊಂದಿಗೆ ವಿತರಣೆ ಪ್ರಾರಂಭವಾಗಿದೆ. ಸೆಪ್ಟೆಂಬರ್‌ನಲ್ಲಿ ಇನ್ನೂ 97 ಯುದ್ಧ ವಿಮಾನಗಳನ್ನು ಆರ್ಡರ್ ಮಾಡಲಾಗಿದೆ. 2034ರವರೆಗೆ ಒಟ್ಟು 180 ವಿಮಾನ ಪೂರೈಸಬೇಕಿದೆ.
ಈಗಾಗಲೇ ಎಂಕೆ1ಎಯ ಯಶಸ್ವಿ ಹಾರಾಟ ಪ್ರಯೋಗಗಳನ್ನು ಎಚ್‌ಎಎಲ್ ಪೂರ್ಣಗೊಳಿಸಿದೆ. 10 ವಿಮಾನಗಳು ಈಗಾಗಲೇ ಜೋಡಣೆಯ ಹಂತದಲ್ಲಿವೆ. ಈ ವರ್ಷ ಜನರಲ್ ಎಲೆಕ್ಟ್ರಿಕ್‌ನಿಂದ ಎಂಟು ಎಂಜಿನ್ ಕೈಸೇರಲಿದ್ದು, ಉತ್ಪಾದನೆಗೆ ಇನ್ನಷ್ಟು ಚುರುಕುಗೊಳ್ಳಲಿದೆ.
ಎಂಕೆ1ಎ ಎಂಬುದು ಹಲವು ವೈಶಿಷ್ಟ್ಯಗಳನು ಒಳಗೊಂಡಿರುವ ಯುದ್ಧ ವಿಮಾನವಾಗಿದ್ದು, ಇದು ಸಕ್ರಿಯ ಎಲೆಕ್ಟ್ರಾನಿಕ್ ಸ್ಕ್ಯಾನ್ಡ್ ಅರೇ (AESA) ರಾಡಾರ್, ಎಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್, ಗಾಜಿನ ಕಾಕ್‌ಪಿಟ್ ಹೊಂದಿದೆ. ಇದರ ಶೇ. 64ರಷ್ಟು ಘಟಕಗಳು ಭಾರತದಲ್ಲಿ ತಯಾರಾಗುತ್ತವೆ.
ಎಂಕೆ1ಎ ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಯ ಕಾರ್ಯಾಚರಣೆಯ ಬಲಪಡಿಸಲು ವಿನ್ಯಾಸಗೊಳಿಸಲಾಗಿದ್ದು, ಮುಂಬರುವ ತೇಜಸ್ ಎಂಕೆ2 ಮತ್ತು 5ನೇ ತಲೆಮಾರಿನ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ (AMCA)ಗೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ.