Wednesday, September 3, 2025

ಭಾರತೀಯ ಸೇನೆಗೆ ಮತ್ತಷ್ಟು ಬಲ: ಮತ್ತೆರೆಡು S-400 ಏರ್ ಡಿಫೆನ್ಸ್ ಸಿಸ್ಟಮ್ಸ್ ಕಳುಹಿಸಲು ಮುಂದಾದ ರಷ್ಯಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಪರೇಷನ್ ಸಿಂದೂರ್ ಕಾರ್ಯಾಚರಣೆ ಸಮಯ ಪಾಕಿಸ್ತಾನದ ಹುಟ್ಟಡಗಿಸಿದ್ದ ರಷ್ಯಾ ನಿರ್ಮಿತ ಏರ್ ಡಿಫೆನ್ಸ್ ಸಿಸ್ಟಮ್ S-400 ನ ಮತ್ತಷ್ಟು ಘಟಕಗಳನ್ನು ಭಾರತಕ್ಕೆ ನೀಡುವುದಾಗಿ ರಷ್ಯಾ ಘೋಷಣೆ ಮಾಡಿದೆ.

ಮೂಲಗಳ ಪ್ರಕಾರ ಎಸ್‌-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಒಂದು ಘಟಕವನ್ನು 2026ರ ವೇಳೆಗೆ ಮತ್ತು ಇನ್ನೊಂದು ಘಟಕವನ್ನು 2027ರ ವೇಳೆಗೆ, ರಷ್ಯಾ ಭಾರತಕ್ಕೆ ತಲುಪಿಸುವ ನಿರೀಕ್ಷೆಯಿದೆ. 2018ರಲ್ಲಿ ಭಾರತವು ಒಟ್ಟು ಐದು ಎಸ್‌-500 ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಪೂರೈಸುವಂತೆ ರಷ್ಯಾವನ್ನು ಕೇಳಿಕೊಂಡಿತ್ತು, ಅದರಂತೆ ರಷ್ಯಾ ಈಗಾಗಲೇ ಮೂರು ಘಟಕಗಳನ್ನು ರವಾನಿಸಿದ್ದು, ಇನ್ನುಳಿದ ಎರಡು ಘಟಕಗಳನ್ನು ಭಾರತಕ್ಕೆ ಕಳುಹಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಕಳೆದ ವರ್ಷ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ರಷ್ಯಾ ಭೇಟಿಯ ಸಮಯದಲ್ಲಿ ಮತ್ತು ಇತ್ತೀಚೆಗೆ ನಡೆದ ಭಾರತ-ರಷ್ಯಾ ದ್ವಿಪಕ್ಷೀಯ ಸಭೆಯಲ್ಲಿ ವಿತರಣೆಯಲ್ಲಿನ ವಿಳಂಬವನ್ನು ಚರ್ಚೆ ಮಾಡಿದ್ದರು.

ಇನ್ನು ರಷ್ಯಾ ಭಾರತಕ್ಕೆ ಬಾಕಿ ನೀಡಬೇಕಿರುವ 2 ಎಸ್ 400 ಘಟಕಗಳು ಮಾತ್ರವಲ್ಲದೇ ಇನ್ನಷ್ಟು ಘಟಕಗಳನ್ನು ಭಾರತಕ್ಕೆ ನೀಡಲು ಉತ್ಸುಕತೆ ತೋರಿದೆ. ಈ ಕುರಿತು ಮಾತನಾಡಿರುವ ರಷ್ಯಾದ ಫೆಡರಲ್ ಸರ್ವಿಸ್ ಫಾರ್ ಮಿಲಿಟರಿ-ಟೆಕ್ನಿಕಲ್ ಕೋಆಪರೇಷನ್‌ನ ಮುಖ್ಯಸ್ಥ ಡಿಮಿಟ್ರಿ ಶುಗಾಯೇವ್ ಅವರು ರಷ್ಯಾ ಮಾಧ್ಯಮ TASS ನಲ್ಲಿ ಮಾತನಾಡಿದ್ದಾರೆ.

‘ಭಾರತವು ಈಗಾಗಲೇ ನಮ್ಮ S-400 ವ್ಯವಸ್ಥೆಯನ್ನು ಹೊಂದಿದೆ. ಈ ಕ್ಷೇತ್ರದಲ್ಲಿಯೂ ನಮ್ಮ ಸಹಕಾರವನ್ನು ವಿಸ್ತರಿಸುವ ಸಾಮರ್ಥ್ಯವಿದೆ. ಅಂದರೆ ಹೊಸ ವಿತರಣೆಗಳು. ಈಗ, ನಾವು ಮಾತುಕತೆ ಹಂತದಲ್ಲಿದ್ದೇವೆ’ ಎಂದು ಹೇಳಿದ್ದಾರೆ.

ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ‘ಗೇಮ್ ಚೇಂಜರ್’
ಭಾರತದ ವಾಯುಸೇನಾ ಮುಖ್ಯಸ್ಥ ಮಾರ್ಷಲ್ ಎಪಿ ಸಿಂಗ್ ಅವರು ಆಪರೇಷನ್ ಸಿಂದೂರ್ ಸಮಯದಲ್ಲಿ ಇದೇ ಎಸ್ 400 ಏರ್ ಡಿಫೆನ್ಸ್ ವ್ಯವಸ್ಥೆಯನ್ನು “ಗೇಮ್-ಚೇಂಜರ್” ಎಂದು ಕರೆದಿದ್ದರು. ಅಂತೆಯೇ S-400 ಭಾರತೀಯ ಸೇನಾಪಡೆಗಳಿಗೆ ಅಮೂಲ್ಯವಾದ ಆಸ್ತಿಯಾಗಿದೆ.

ಇದನ್ನೂ ಓದಿ