ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತ ರಕ್ಷಣಾ ವಲಯಕ್ಕೆ ಹೆಚ್ಚು ಮಹತ್ವ ನೀಡುತ್ತಿರುವ ಭಾರತ ಸರ್ಕಾರ ಈಗ ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಸಾಮರ್ಥ್ಯವನ್ನ ಬಲಪಡಿಸಲು ಮಹತ್ವದ ಪ್ರಸ್ತಾವನೆಯೊಂದಕ್ಕೆ ಅನುಮೋದನೆ ನೀಡಿದೆ.
ರಕ್ಷಣಾ ಸಚಿವಾಲಯದ ರಕ್ಷಣಾ ಸ್ವಾಧೀನ ಮಂಡಳಿ (DAC) ಸುಮಾರು 79,000 ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಉತ್ಪನ್ನಗಳ ಖರೀದಿ ಮತ್ತು ಉನ್ನತೀಕರಿಸುವ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ.
ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಯುದ್ಧ ಕಾರ್ಯಾಚರಣೆಯ ಸಾಮರ್ಥ್ಯ ಬಲಪಡಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ಡಿಸಿಎ ತಿಳಿಸಿದೆ. ಈ ಯೋಜನೆಯಲ್ಲಿ ನೂತನ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿಯೂ ಸೇರಿದೆ ಎಂದು ವರದಿಗಳು ತಿಳಿಸಿವೆ.
200 T-90 ಭೀಷ್ಮ ಟ್ಯಾಂಕ್‌ಗಳನ್ನ ಜೀವಿತಾವಧಿ ಉನ್ನತೀಕರಿಸುವುದು, ಕಾರ್ಯಾಚರಣೆ ಸಾಮರ್ಥ್ಯ ಹೆಚ್ಚಿಸಲು ಕೂಲಂಕುಷ ಪರೀಕ್ಷೆಗೆ ಒಳಪಡಿಸುವುದು. ಈ ಕೆಲಸವನ್ನ ರಕ್ಷಣಾ ಸಾರ್ವಜನಿಕ ವಲಯ ಘಟಕ (DPSU) ನಿರ್ವಹಿಸುತ್ತದೆ.
ಯಾವುದಕ್ಕೆಲ್ಲ ಅನುಮೋದನೆ?
ಮಧ್ಯಮ ಗಾತ್ರದ ಲಿಫ್ಟ್ ಹೆಲಿಕಾಪ್ಟರ್ Mi-17 ನ ಜೀವಿತಾವಧಿ ಅಪ್‌ಗ್ರೇಡ್ ಮಾಡುವುದು ಜೊತೆಗೆ ಕಾರ್ಯಾಚರಣೆ ಸಾಮರ್ಥ್ಯ ಹೆಚ್ಚಿಸುವುದು
ಆಧುನಿಕ ತಂತ್ರಗಾರಿಕೆಯ ಯುದ್ಧ ಕಾರ್ಯಾಚರಣೆಗಾಗಿ ಕಾಮಿಕೇಜ್ ಡ್ರೋನ್ (ಆತ್ಮಹತ್ಯಾ ಡ್ರೋನ್) ಗಳನ್ನ ಖರೀದಿ ಮಾಡುವುದು. ಇದು ಶತ್ರು ನೆಲೆಗಳನ್ನ ನಿಖರವಾಗಿ ಗುರುತಿಸಿ ದಾಳಿ ಮಾಡುತ್ತದೆ.
ಮಧ್ಯಮ-ಶ್ರೇಣಿಯ ಭೂಮಿಯ ಮೇಲ್ಮೈನಿಂದ ಗಾಳಿಗೆ ಚಿಮ್ಮುವ MRSAM ಕ್ಷಿಪಣಿಗಳ ಖರೀದಿಸಲು ಅನುಮೋದನೆ ನೀಡಲಾಗಿದೆ.
200 ಕಿಮೀ ಗಿಂತಲೂ ಹೆಚ್ಚಿನ ವ್ಯಾಪ್ತಿ ಹೊಂದಿರುವ ಅಸ್ತ್ರ ಮಾರ್ಕ್-2 (ಏರ್ ಟು ಏರ್ ಮಿಸೈಲ್) ಕ್ಷಿಪಣಿಯನ್ನ ಅಭಿವೃದ್ಧಿಪಡಿಸಿ, ವಾಯುಪಡೆಗೆ ಖರೀದಿಸುವುದು.
ಇಸ್ರೇಲ್‌ನಿಂದ ಹೆಚ್ಚಿನ ಸಂಖ್ಯೆಯ ಸ್ಪೈಸ್-1000 ಬಾಂಬ್‌ಗಳನ್ನ ಖರೀದಿಸೋದಕ್ಕೂ ಅನುಮೋದನೆ ನೀಡಲಾಗಿದೆ. ಇದು ಗಾಳಿಯಿಂದ ಭೂಮಿಗೆ ನಿಗದಿತ ಮಾರ್ಗಸೂಚಿಯಂತೆ ದಾಳಿ ನಡೆಸುವ ಬಾಂಬ್‌ಗಳಾಗಿದೆ.
120 ಕಿಮೀ ವ್ಯಾಪ್ತಿಯ ಹೊಸ ಪಿನಾಕಾ ರಾಕೆಟ್ (ಬಹು-ಬ್ಯಾರೆಲ್ ರಾಕೆಟ್ ಲಾಂಚರ್) ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ. ಇದರೊಂದಿಗೆ ಇದರ ಸಾಮರ್ಥ್ಯವನ್ನ 40 ಕಿಮೀ ವ್ಯಾಪ್ತಿಯಿಂದ 80 ಕಿಮೀ ವ್ಯಾಪ್ತಿಗೆ ಅಪ್‌ಗ್ರೇಡ್ ಮಾಡುವುದು.
ಏರ್-ಟು-ಏರ್ ರೀಫ್ಯೂಯೆಲರ್, ಏರ್‌ಬೋರ್ನ್ ವಾರ್ನಿಂಗ್ ಮತ್ತು ಕಂಟ್ರೋಲ್ ಸಿಸ್ಟಮ್ಸ್ (AWACS) ಸೇರಿದಂತೆ ಹಲವು ರಕ್ಷಣಾ ಉತ್ಪನ್ನಗಳ ಖರೀದಿಗೆ ಅನುಮೋದನೆ ನೀಡಲಾಗಿದೆ.
ಅಮೆರಿಕದ MQ9B ಡ್ರೋನ್ ಗುತ್ತಿಗೆಗೆ ಅಸ್ತು
ಅಮೆರಿಕ ನಿರ್ಮಿತ ಎರಡು `MQ9B ಡ್ರೋನ್’ (ಹೈ ಆಲ್ಟಿಟ್ಯೂಡ್ ಲಾಂಗ್ ಎಂಡ್ಯೂರೆನ್ಸ್ (HALE) ಡ್ರೋನ್‌ಗಳನ್ನ ಮೂರು ವರ್ಷಗಳ ಕಾಲ ಗುತ್ತಿಗೆಗೆ ಪಡೆಯಲು ಒಪ್ಪಿಗೆ ಸೂಚಿಸಲಾಗಿದೆ.
2023ರಲ್ಲೇ ಆಗಿತ್ತು ಒಪ್ಪಂದ
ಈಗಾಗಲೇ ಭಾರತ 31 ʻMQ9B ಡ್ರೋನ್ʼ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದು, 2028ಕ್ಕೆ ವಿತರಣೆ ಶುರುವಾಗುತ್ತದೆ. 2023ರಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದ ವೇಳೆ ಭಾರತ 31 MQ-9B ಸ್ಕೈ ಗಾರ್ಡಿಯನ್ ಡ್ರೋನ್‌ಗಳನ್ನು ಖರೀದಿಸಲು ಪ್ರಸ್ತಾಪಿಸಿತ್ತು. ಭಾರತ ಖರೀದಿಸಲಿರುವ 31 ಡ್ರೋನ್‌ಗಳನ್ನು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಬಳಸಲಿದ್ದು, ಇದರ ಅಂದಾಜು ವೆಚ್ಚ 3.99 ಶತಕೋಟಿ ಡಾಲರ್ ನಷ್ಟು ಆಗಲಿದೆ.
ಭಾರತ ಸರ್ಕಾರವು 31 MQ-9B ಸ್ಕೈ ಗಾರ್ಡಿಯನ್ ಡ್ರೋನ್ ಖರೀದಿಸಲು ವಿನಂತಿಸಿದೆ. ಇದರೊಂದಿಗೆ 161 ಎಂಬೆಡೆಡ್ ಗ್ಲೋಬಲ್ ಪೊಸಿಷನಿಂಗ್ ಮತ್ತು ಇನರ್ಷಿಯಲ್ ನ್ಯಾವಿಗೇಷನ್ ಸಿಸ್ಟಮ್ಸ್ (EGIs), 35 L3 RIO ಗ್ರಾಂಡೆ ಕಮ್ಯುನಿಕೇಷನ್ಸ್ ಇಂಟೆಲಿಜೆನ್ಸ್ ಸೆನ್ಸರ್ ಸೂಟ್ಸ್, 170 AGM-114R ಹೆಲ್‌ಫೈರ್ ಕ್ಷಿಪಣಿಗಳು, 16 M36E9 ಹೆಲ್ಫೈರ್ ಕ್ಯಾಪ್ಟಿವ್ ಏರ್ ಟ್ರೈನಿಂಗ್ ಕ್ಷಿಪಣಿಗಳು (CATM), ಲೈವ್ ಫ್ಯೂಜ್ ಜೊತೆಗೆ 310 ಜಿಬಿಯು-39B/B ಲೇಸರ್ ಸಣ್ಣ ವ್ಯಾಸದ ಬಾಂಬ್‌ಗಳು (LSDB) ಸೇರಿದಂತೆ ಬಿಡಿ ಭಾಗಗಳು ಸೇರಿದಂತೆ ಹಲವು, ದುರಸ್ತಿ ಉಪಕರಣಗಳನ್ನ ಖರೀದಿಸಲು ಈಗಾಗಲೇ ಒಪ್ಪಂದ ಮಾಡಿಕೊಂಡಿದೆ.

