ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದೂ ಧರ್ಮದಲ್ಲಿ ಜನರು ಅತಿ ಹೆಚ್ಚು ಪೂಜಿಸಲಾಗುವ ದೇವರು ಮತ್ತು ದೇವತೆಗಳಲ್ಲಿ ಗಣೇಶನೂ ಒಬ್ಬನಾಗಿದ್ದಾನೆ. ಗಣೇಶನನ್ನು ಪ್ರತಿನಿತ್ಯವೂ ಪೂಜಿಸಲಾಗುತ್ತದೆಯಾದರೂ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಗಣೇಶನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಇಂದು ನಾಡಿನೆಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ ಮನೆಮಾಡಿದ್ದು, ಈ ಬಾರಿಯ ಶುಭ ಮಹೂರ್ತ, ಪೂಜಾ ವಿಧಾನದ ಮಾಹಿತಿ ಇಲ್ಲಿದೆ..
2025ರ ಆಗಸ್ಟ್ 27ರಂದು ಬುಧವಾರ
ಚತುರ್ಥಿ ತಿಥಿ ಆರಂಭ: 2025ರ ಆಗಸ್ಟ್ 26ರಂದು ಮಂಗಳವಾರ ಮಧ್ಯಾಹ್ನ 1:54ರಿಂದ
ಚತುರ್ಥಿ ತಿಥಿ ಮುಕ್ತಾಯ: 2025ರ ಆಗಸ್ಟ್ 27ರಂದು ಬುಧವಾರ ಮಧ್ಯಾಹ್ನ 3:44 ರವರೆಗೆ
ಗಣಪತಿ ಪೂಜೆಗೆ ಶುಭ ಮುಹೂರ್ತ: 2025ರ ಆಗಸ್ಟ್ 27ರಂದು ಬುಧವಾರ ಬೆಳಗ್ಗೆ 11:05 – 1:40
ಚಂದ್ರ ದರ್ಶನ ಅಶುಭ ಸಮಯ: 2025ರ ಆಗಸ್ಟ್ 27ರಂದು ಬುಧವಾರ ಬೆಳಗ್ಗೆ 9:28 – ರಾತ್ರಿ 8:57ರವರೆಗೆ
ಗಣೇಶ ಚತುರ್ಥಿ ದಿನದಂದು ಗಣಪತಿ ಪೂಜೆಯನ್ನು ರಾಹುಕಾಲದ ಸಮಯದಲ್ಲಿ ಮಾಡಬಾರದು.
ಈ ದಿನ ರಾಹುಕಾಲವು ಆಗಸ್ಟ್ 27ರಂದು ಬುಧವಾರ ಮಧ್ಯಾಹ್ನ 12:22 ರಿಂದ ಮಧ್ಯಾಹ್ನ 1:59ರವರೆಗೆ ಇರುತ್ತದೆ. ಬಳಿಕ ಶುಕ್ಲ ಯೋಗವು ಮಧ್ಯಾಹ್ನ 12:35ರಿಂದ 1:18ರವರೆಗೆ ಇರುತ್ತದೆ. ಈ ಶುಕ್ಲ ಯೋಗದಲ್ಲಿ ಪೂಜೆ ಮಾಡುವುದು ಮಂಗಳಕರವಾಗಿರುತ್ತದೆ.
ಪೂಜೆ ಮಾಡುವ ವಿಧಾನ
ಗಣೇಶ ಚತುರ್ಥಿಯನ್ನು ಮುಖ್ಯವಾಗಿ ಶುದ್ಧೀಕರಣದೊಂದಿಗೆ ಪ್ರಾರಂಭಿಸಲಾಗುತ್ತದೆ. ಮುಂಜಾನೆ ಎದ್ದು ಸ್ನಾನ ಮಾಡಿ ಶುದ್ಧರಾಗಬೇಕು.
ಇದರ ಬಳಿಕ ಪೂಜೆ ಮಾಡುವ ಸ್ಥಳವನ್ನು ಕೂಡ ಶುದ್ಧಗೊಳಿಸಬೇಕು.
ಪೂಜೆ ಮಾಡುವ ಸ್ಥಳದಲ್ಲಿ ಒಂದು ರಂಗೋಲಿಯನ್ನು ಹಾಕಿ ಅದರ ಮೇಲೆ ಒಂದು ಮರದ ಪೀಠವನ್ನು ಇಟ್ಟು, ಅದರ ಮೇಲೆ ಕೆಂಪು ಬಣ್ಣದ ಬಟ್ಟೆಯನ್ನು ಹರಡಿ.
ಬಳಿಕ ಹೂವು, ಮಾವಿನ ಎಲೆ ಹಾಗೂ ಬಾಳೆ ಗಿಡಗಳಿಂದ ಮಂಟಪವನ್ನು ಸಿದ್ಧಗೊಳಿಸಿ.
ಅದರ ಮೇಲೆ ಜೇಡಿಮಣ್ಣಿನಿಂದ ತಯಾರಿಸಿದ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ. ಈ ಸಮಯದಲ್ಲಿ ಗಣೇಶನ ವಿಗ್ರಹದ ಮುಖವು ಪೂರ್ವ ಅಥವಾ ಉತ್ತರ ದಿಕ್ಕಿನತ್ತ ಇರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
ಪೂಜೆಯು ಗಣಪತಿಯ ಆವಾಹನೆಯೊಂದಿಗೆ ಪ್ರಾರಂಭವಾಗುವುದು.
ಗಣಪತಿಯನ್ನು ಆವಾಹನೆ ಮಾಡುವಂತಹ ಸಂದರ್ಭದಲ್ಲಿ ಗಣಪತಿ ಮಂತ್ರಗಳನ್ನು, ಗಣಪತಿ ಅಥರ್ವಶೀರ್ಷವನ್ನು ಪಠಿಸಲಾಗುತ್ತದೆ.
ಗಣೇಶನಿಗೆ ಷೋಡಶೋಪಚಾರವನ್ನು ಮಾಡಿ ನೀರು, ಹೂವು, ಹಣ್ಣು, ಧೂಪದ್ರವ್ಯ, ದೀಪ ಸಿಹಿ ತಿನಿಸುಗಳು ಸೇರಿದಂರೆ 16 ವಿಧದ ವಸ್ತುಗಳನ್ನು ಗಣೇಶನಿಗೆ ಅರ್ಪಿಸಲಾಗುತ್ತದೆ.
ಮೋದಕವು ಗಣೇಶನಿಗೆ ಅತ್ಯಂತ ಪ್ರಿಯವಾದ ನೈವೇದ್ಯವಾದ್ದರಿಂದ ಇದನ್ನು ತಪ್ಪದೇ ಗಣಪತಿ ಪೂಜೆಯಲ್ಲಿ ಬಳಸಲಾಗುತ್ತದೆ.
ಗಣಪತಿ ಭಜನೆ, ಆರತಿಯನ್ನು ಮಾಡಲಾಗುತ್ತದೆ.
ಗಣಪತಿಯನ್ನು ವಿಸರ್ಜನೆ ಮಾಡುವವರೆಗೆ ಪ್ರತಿದಿನವೂ ಗಣೇಶನ ವಿಗ್ರಹಕ್ಕೆ ಆರತಿಯನ್ನು, ಪ್ರಾರ್ಥನೆಯನ್ನು ಮತ್ತು ನೈವೇದ್ಯವನ್ನು ಅರ್ಪಿಸಿಕೊಂಡು ಬರಲಾಗುತ್ತದೆ.