Thursday, November 27, 2025

30 ಲಕ್ಷ ಮೌಲ್ಯದ ಐಫೋನ್ ದೋಚಿದ್ದ ಗ್ಯಾಂಗ್ ಅರೆಸ್ಟ್: ಕದ್ದಿದ್ದು ʼಪ್ರೀತಿʼಗಾಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರೇಯಸಿಗಾಗಿ ಕಳ್ಳತನಕ್ಕಿಳಿದು 30 ಲಕ್ಷ ರೂ. ಮೌಲ್ಯದ ಐಫೋನ್ ದೋಚಿದ್ದ ಗ್ಯಾಂಗ್‌ನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನ ವರ್ತೂರಿನಲ್ಲಿ ನಡೆದಿದೆ.

ಬಂಧಿತರನ್ನು ದಿವಾಸ್ ಕಮಿ, ಆರೋಹನ್ ತಾಪಾ ಮತ್ತು ಅಸ್ಮಿತಾ ಎಂದು ಗುರುತಿಸಲಾಗಿದ್ದು, ಬಂಧಿತರಿಂದ 30 ಲಕ್ಷ ರೂ. ಮೌಲ್ಯದ ಐಫೋನ್ 17ನ ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರೇಯಸಿ ಅಸ್ಮಿತಾ ಗಂಡನನ್ನ ಬಿಟ್ಟು ಪ್ರಿಯತಮ ದಿವಾಸ್ ಜೊತೆ ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳಿಂದ ವಾಸವಾಗಿದ್ದರು. ಕಡಿಮೆ ಸಮಯದಲ್ಲಿ ದುಪ್ಪಟ್ಟು ಹಣ ಸಂಗ್ರಹಿಸಬೇಕೆಂಬ ಆಸೆಯಿಂದ ಕಳ್ಳತನಕ್ಕಿಳಿಯುವ ಪ್ಲ್ಯಾನ್‌ ಮಾಡಿದ್ದರು. ಪ್ರಿಯತಮ ದಿವಾಸ್ ತನ್ನ ಸ್ನೇಹಿತ ಆರೋಹನ್ ತಾಪಾ ಜೊತೆ ಸೇರಿಕೊಂಡು ದೊಡ್ಡ ದೊಡ್ಡ ಮೊಬೈಲ್ ಶೋಂರೂಂಗಳಿಗೆ ಕನ್ನ ಹಾಕಲು ಯೋಜಿಸುತ್ತಾರೆ.

24 ಗಂಟೆಯೊಳಗೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಒಂದೇ ಕಂಪನಿಯ ಎರಡು ಶೋರೂಂಗೆ ಕನ್ನ ಹಾಕಿದ್ದರು. ಶೋರೂಂ ಡೋರ್ ಒಡೆದು ಒಳನುಗ್ಗಿ ದುಬಾರಿ ಮೊಬೈಲ್‌ಗಳನ್ನು ದೋಚಿ, ಎಮರ್ಜೆನ್ಸಿ ಎಕ್ಸಿಟ್ ಮೂಲಕ ಹೊರಹೋಗುತ್ತಿದ್ದರು. ಬಳಿಕ ಕದ್ದ ಮೊಬೈಲ್‌ಗಳನ್ನು ಪ್ರೇಯಸಿ ಅಸ್ಮಿತಾ ಮಾರಾಟ ಮಾಡುತ್ತಿದ್ದಳು.

ಈ ಸಂಬಂಧ ವರ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 30 ಲಕ್ಷ ರೂ. ಮೌಲ್ಯದ 25ಕ್ಕೂ ಅಧಿಕ ಮೊಬೈಲ್ ಹಾಗೂ ಒಂದು ವಾಚ್ ವಶಕ್ಕೆ ಪಡೆಡಿದ್ದಾರೆ. ಸದ್ಯ ತನಿಖೆ ಮುಂದುವರೆದಿದೆ.

error: Content is protected !!