Tuesday, September 30, 2025

ಸಾಮೂಹಿಕ ಅತ್ಯಾಚಾರ: ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ-ಮೂವರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದ ಖಗ್ರಾಛರಿ ಜಿಲ್ಲೆಯ ಗುಯಿಮಾರಾ ಉಪಜಿಲ್ಲೆಯಲ್ಲಿ 8ನೇ ತರಗತಿಯ ಶಾಲಾ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಆರೋಪದ ನಂತರ ಬುಡಕಟ್ಟು ಜನರು ಮತ್ತು ಬಂಗಾಳಿ ಸಮುದಾಯದ ನಡುವೆ ಹಿಂಸಾಚಾರ ಭುಗಿಲೆದ್ದಿದೆ. ಈ ಸಂಘರ್ಷದಲ್ಲಿ ಮೂವರು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. ಪೊಲೀಸರು ಈಗಾಗಲೇ ಮೂವರು ಪುರುಷರ ಸಾವನ್ನು ದೃಢಪಡಿಸಿದ್ದಾರೆ, ಆದರೆ ಇನ್ನೂ ಅವರ ಗುರುತು ಪತ್ತೆಯಾಗಿಲ್ಲ.

ಟ್ಯೂಷನ್‌ನಿಂದ ಬರುತ್ತಿದ್ದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎನ್ನಲಾಗಿದೆ. ಆಕೆಯ ಪೋಷಕರು ಮತ್ತು ನೆರೆಹೊರೆಯವರು ಹುಡುಕಿದಾಗ ಮಧ್ಯರಾತ್ರಿಯ ಸುಮಾರಿಗೆ ಪಟ್ಟಣದ ದೂರದ ಪ್ರದೇಶದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಕೆ ಪತ್ತೆಯಾಗಿದ್ದಳು. ಆಕೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ಸಶಸ್ತ್ರ ಬಲಗಳ ಸಹಾಯದಿಂದ ಪೊಲೀಸ್ ತಂಡವು ಬಂಗಾಳಿ ಯುವಕನನ್ನು ಬಂಧಿಸಿ, ನ್ಯಾಯಾಲಯದ ಆದೇಶದ ಮೇರೆಗೆ ಆರು ದಿನಗಳ ಅವಧಿಗೆ ವಿಚಾರಣೆ ನಡೆಸುತ್ತಿದೆ.

ಬಂಗ್ಲಾದೇಶ ಗೃಹ ಸಚಿವಾಲಯವು ತನ್ನ ಹೇಳಿಕೆಯಲ್ಲಿ, “ಖಗ್ರಾಛರಿ ಜಿಲ್ಲೆಯ ಗುಯಿಮಾರಾ ಉಪಜಿಲ್ಲೆಯಲ್ಲಿ ನಡೆದ ಈ ದುರ್ಘಟನೆಯು ತೀವ್ರ ದುಃಖವನ್ನುಂಟುಮಾಡಿದೆ. 13 ಸೇನಾ ಸಿಬ್ಬಂದಿ, ಮೂವರು ಪೊಲೀಸ್ ಅಧಿಕಾರಿಗಳು ಮತ್ತು ಇತರ ಅನೇಕರು ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಭಾಗವಹಿಸಿದವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದೆ.