ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚಂಡೀಗಢದ ಸೆಕ್ಟರ್ 26ರ ಟಿಂಬರ್ ಮಾರ್ಕೆಟ್ ಬಳಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹಚರನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಇಂದ್ರಪ್ರೀತ್ ಸಿಂಗ್ ಅಲಿಯಾಸ್ ಪರ‍್ರಿ (35) ಹತ್ಯೆಯಾದ ಸಹಚರ. ಗ್ಯಾಂಗ್ ವಾರ್‌ನಿಂದಾಗಿ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪರ‍್ರಿ ಸೋಮವಾರ ಸಂಜೆ ಎಸ್‌ಯುವಿ ಕಾರಿನಲ್ಲಿ ಖಾಸಗಿ ಕ್ಲಬ್‌ನಿಂದ ಹೊರಟಿದ್ದ. ಈ ವೇಳೆ ಆತನ ಜೊತೆ ಮತ್ತೊಬ್ಬ ವ್ಯಕ್ತಿ ಕೂಡ ಇದ್ದ. ಆತನ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ವಾಹನವು ಸ್ವಲ್ಪ ದೂರ ಚಲಿಸಿದ ಕೂಡಲೇ, ಪರ‍್ರಿ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿ ಪರ‍್ರಿ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡು ಹಾರಿಸಿದ ಬಳಿಕ ಆ ವ್ಯಕ್ತಿ ಕಾರಿನಿಂದ ಕೆಳಗಿಳಿದು ಮತ್ತೆ ಪರ‍್ರಿ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ಪರ‍್ರಿ ಕಾರನ್ನು ಹಿಂಬಾಲಿಸುತ್ತಿದ್ದ ಮತ್ತೊಂದು ಕಾರು ಅಲ್ಲಿ ಬಂದು ನಿಂತಿದೆ. ಪರ‍್ರಿ ಸಾವನ್ನು ಖಚಿತಪಡಿಸಿಕೊಂಡ ನಂತರ ವ್ಯಕ್ತಿ ಮತ್ತೊಂದು ಕಾರು ಹತ್ತಿ ಅಲ್ಲಿಂದ ಪರಾರಿಯಾಗಿದ್ದಾನೆ.
ಘಟನೆ ಬಳಿಕ ಹರಿ ಬಾಕ್ಸರ್ ಅರ್ಜೂ ಬಿಷ್ಣೋಯ್ ಎಂಬ ಫೇಸ್‌ಬುಕ್ ಖಾತೆಯಲ್ಲಿ ಈ ಕೃತ್ಯ ತಾವೇ ಎಸಗಿರುವುದಾಗಿ ಪೋಸ್ಟ್ ಹಾಕಿ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿದೆ. ಪರ‍್ರಿ ಸ್ಥಳೀಯ ಕ್ಲಬ್‌ಗಳಿಂದ ಹಣವನ್ನು ಸುಲಿಗೆ ಮಾಡಿದ್ದಾನೆ ಮತ್ತು ಆತನ ಸಹಚರರ ಮೇಲೆ ದಾಳಿ ಮಾಡಲು ಯತ್ನಿಸಿದ್ದ ಎಂದು ಪೋಸ್ಟ್‌ನಲ್ಲಿ ಆರೋಪಿಸಲಾಗಿದೆ. ಈ ಪೋಸ್ಟ್‌ನ ಸತ್ಯಾಸತ್ಯತೆ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

