ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ರಾಜ್ಯದ ಸಿರ್ಹಿಂದ್ ರೈಲು ನಿಲ್ದಾಣದ ಬಳಿ ಗರೀಬ್ ರಥ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಲುಧಿಯಾನಾದಿಂದ ದೆಹಲಿಗೆ ತೆರಳುತ್ತಿದ್ದ ಈ ರೈಲಿನ ಎಸಿ ಕೋಚ್‌ಗಳು ಹೊತ್ತಿ ಉರಿದ ಪರಿಣಾಮ ಒಬ್ಬ ಮಹಿಳಾ ಪ್ರಯಾಣಿಕೆಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯು ಶನಿವಾರ ಬೆಳಗ್ಗೆ ಸುಮಾರು 7:30ರ ವೇಳೆಗೆ ಅಮೃತಸರದಿಂದ ಹೊರಟ ಗರೀಬ್ ರಥ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12204) ನ ಜಿ-19 ಎಸಿ ಕೋಚ್‌ನಲ್ಲಿ ಸಂಭವಿಸಿದೆ. ರೈಲು ಚಲನೆಯಲ್ಲಿದ್ದ ವೇಳೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಪ್ರಯಾಣಿಕರು ಆತಂಕಗೊಂಡು ತಕ್ಷಣ ಸಹಾಯಕ್ಕಾಗಿ ಕೂಗಿಕೊಂಡರು. ಪ್ರಯಾಣಿಕರೊಬ್ಬರು ಸರಪಳಿ ಎಳೆದು ರೈಲನ್ನು ತಕ್ಷಣ ನಿಲ್ಲಿಸಿದರು. ಚಾಲಕರು ಮತ್ತು ಸಿಬ್ಬಂದಿ ಕೂಡಲೇ ಪ್ರಯಾಣಿಕರನ್ನು ಸುರಕ್ಷಿತವಾಗಿ ರೈಲಿನಿಂದ ಇಳಿಸಿದರು.
ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿಗಳ ಪ್ರಕಾರ, ಬೆಂಕಿಯು ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾಗಿರುವ ಸಾಧ್ಯತೆ ಇದೆ. ಬೆಂಕಿ ಹರಡುವ ಮುನ್ನವೇ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಿದ್ದು, ಅಗ್ನಿಯನ್ನು ನಿಯಂತ್ರಣಕ್ಕೆ ತರಲಾಯಿತು. ಕೋಚ್‌ನ 2 ರಿಂದ 3 ಬೋಗಿಗಳು ಹಾನಿಗೊಳಗಾಗಿವೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಘಟನೆಯ ವೇಳೆ ಕೆಲ ಪ್ರಯಾಣಿಕರು ಗೊಂದಲದಲ್ಲಿ ರೈಲಿನಿಂದ ಇಳಿಯುವ ಪ್ರಯತ್ನದಲ್ಲಿ ಸಣ್ಣಪುಟ್ಟ ಗಾಯಗಳಾದರೂ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸದ್ಯ, ರೈಲ್ವೆ ಇಲಾಖೆ ಘಟನೆ ಕುರಿತು ತನಿಖೆ ಆರಂಭಿಸಿದೆ.