ಹೊಸದಿಗಂತ ಡಿಜಿಟಲ್ ಡೆಸ್ಕ್:
IPL 2026 ಕೋಲ್ಕತಾ ನೈಟ್ ರೈಡರ್ಸ್ (KKR) ತಂಡದ ಭಾಗವಾಗಿದ್ದ ಬಾಂಗ್ಲಾದೇಶ ವೇಗಿ ಮುಸ್ತಾಫಿಝುರ್ ರೆಹಮಾನ್ ಅವರನ್ನು ಕೈ ಬಿಡಲಾಗಿದ್ದು, ಇದರ ಬೆನ್ನಲ್ಲೆ ಬಾಂಗ್ಲಾ ವೇಗಿ ಪಾಕಿಸ್ತಾನದಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಆಡಲು ಸಜ್ಜಾಗುತ್ತಿದ್ದಾರೆ.
ಕಳೆದ ವರ್ಷ ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆದಿದ್ದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆಟಗಾರರ ಮಿನಿ ಹರಾಜಿನಲ್ಲಿ ಕೋಲ್ಕತಾ ಫ್ರಾಂಚೈಸಿಯು 9.20 ಕೋಟಿ ರು. ಗಳನ್ನು ನೀಡಿ ಮುಸ್ತಾಫಿಝುರ್ ರೆಹಮಾನ್ ಅವರನ್ನು ಖರೀದಿಸಿತ್ತು. ಆದರೆ, ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯದಿಂದ ಬೇಸತ್ತ ಬಿಸಿಸಿಐ ಮುಸ್ತಾಫಿಝುರ್ ರೆಹಮಾನ್ ಅವರನ್ನು ಕೈ ಬಿಡುವಂತೆ ಕೆಕೆಆರ್ ಗೆ ಹೇಳಿತ್ತು.
ಇದೀಗ ಐಪಿಎಲ್‌ನಿಂದ ಹೊರನಡೆದ ಬೆನ್ನಲ್ಲೆ ಪಾಕಿಸ್ತಾನ ಸೂಪರ್ ಲೀಗ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದ ಮೂಲಕ ಮುಸ್ತಾಫಿಝುರ್ ರೆಹಮಾನ್ ಮುಂದಿನ ಆವೃತ್ತಿಯ ಟೂರ್ನಿಯಲ್ಲಿ ಆಡಲಿದ್ದಾರೆ ಎಂದು ದೃಢಪಡಿಸಿತು.
ಆದರೆ, ಪಿಎಸ್‌ಎಲ್ ಡ್ರಾಫ್ಟ್ ಇನ್ನೂ ನಡೆಯುವುದು ಬಾಕಿ ಇದೆ. ಜನವರಿ 21 ರಂದು ಪಿಎಸ್‌ಎಲ್ ಡ್ರಾಫ್ಟ್ ನಡೆಯಲಿದ್ದು, ಎಂಟು ವರ್ಷಗಳ ಬಳಿಕ ಮುಸ್ತಾಫೀಝುರ್ ರೆಹಮಾನ್ ಪಾಕಿಸ್ತಾನ ಸೂಪರ್ ಲೀಗ್‌ಗೆ ಮರಳುತ್ತಿದ್ದಾರೆ. ಕೊನೆಯ ಬಾರಿ ಈ ಟೂರ್ನಿಯಲ್ಲಿ ಅವರು ಕ್ವಾಲೆಂಡರ್ಸ್ ಪರ ಆಡಿದ್ದರು.

