Tuesday, January 6, 2026

ಐಪಿಎಲ್ ನಿಂದ ಮುಸ್ತಾಫಿಜುರ್‌ ಗೆ ಗೇಟ್ ಪಾಸ್: ಇಲ್ಲಿ ನಾವು ಯಾರನ್ನು ಶಿಕ್ಷಿಸುತ್ತಿದ್ದೇವೆ? ಶಶಿ ತರೂರ್ ಪ್ರಶ್ನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ಬಾಂಗ್ಲಾದೇಶ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟ ಬೆನ್ನಲ್ಲೇ ಬಿಸಿಸಿಐ, ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಆಯ್ಕೆಯಾಗಿದ್ದ ಬಾಂಗ್ಲಾದೇಶದ ಆಟಗಾರರನ್ನು ರಿಲೀಸ್ ಮಾಡುವಂತೆ ಸೂಚಿಸಿತ್ತು. ಇದರ ಬೆನ್ನಲ್ಲ ಕೋಲ್ಕತಾ ಬಾಂಗ್ಲಾದೇಶ ಮೂಲದ ಎಡಗೈ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ರಿಲೀಸ್ ಮಾಡಿದೆ.

ಈ ಕುರಿತಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ತಮ್ಮ ಅಸಮಾಧಾನ ಹೊರಹಾಕಿದ್ದು, ಸುಖಾಸುಮ್ಮನೇ ಇದನ್ನು ರಾಜಕೀಕರಣ ಮಾಡಲಾಗುತ್ತಿದೆ ಎಂದು ಬಿಸಿಸಿಐ ಮೇಲೆ ಕಿಡಿ ಕಾರಿದ್ದಾರೆ.

ಬಿಸಿಸಿಐ ಈ ಕ್ರಮವನ್ನು ಪ್ರಶ್ನಿಸಿರುವ ಶಶಿ ತರೂರ್, ಒಂದು ವೇಳೆ ಆಟಗಾರ ಬಾಂಗ್ಲಾದೇಶದ ಕ್ರಿಕೆಟಿಗರಾದ ಲಿಟ್ಟನ್ ದಾಸ್ ಅಥವಾ ಸೌಮ್ಯ ಸರ್ಕಾರ್ ಆಗಿದ್ದರೆ, ಇಬ್ಬರೂ ಹಿಂದುಗಳಾಗಿದ್ದರೆ ನಿಮ್ಮ ಪ್ರತಿಕ್ರಿಯೆ ಏನಾಗುತ್ತಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.

ಇಲ್ಲಿ ನಾವು ಯಾರನ್ನು ಶಿಕ್ಷಿಸುತ್ತಿದ್ದೇವೆ. ಒಂದು ರಾಷ್ಟ್ರ, ಒಬ್ಬ ವ್ಯಕ್ತಿ, ಅಥವಾ ಅವನ ಧರ್ಮ? ಕ್ರೀಡೆಯ ಈ ಅರ್ಥಹೀನ ರಾಜಕೀಯಕರಣವು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ “ಹೊರೆಯನ್ನು” ಕ್ರಿಕೆಟ್ ಹೊರುವಂತೆ ಮಾಡಬಾರದು ಎಂದು ಶಶಿ ತರೂರ್ ಹೇಳಿದರು. ಭಾರತವು ತನ್ನ ಅಲ್ಪಸಂಖ್ಯಾತರನ್ನು ರಕ್ಷಿಸಲು ಢಾಕಾ ಮೇಲೆ ಒತ್ತಡ ಹೇರುತ್ತಲೇ ಇರಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಈ ಘಟನೆಗೂ ಮುಸ್ತಾಫಿಜುರ್‌ಗೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಮುಸ್ತಾಫಿಜುರ್ ರಹಮಾನ್ ಮೇಲೆ ಯಾವುದೇ ದ್ವೇಷ ಭಾಷಣ, ದಾಳಿ ಅಥವಾ ಅಂತಹ ಕೃತ್ಯಗಳನ್ನು ಸಮರ್ಥಿಸಿಕೊಂಡಂತಹ ಆರೋಪಗಳಿಲ್ಲ. ಅವರು ಒಬ್ಬ ಕ್ರೀಡಾಪಟು, ಮತ್ತು ಕ್ರೀಡೆಯ ಜತೆ ರಾಜಕೀಯ ಬೆರೆಸುವುದು ನ್ಯಾಯಯುತವಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ.

ಭಾರತವು ತನ್ನ ಎಲ್ಲಾ ನೆರೆಹೊರೆಯವರನ್ನು ಪ್ರತ್ಯೇಕಿಸುವ ದೇಶವಾಗಿ ಮಾರ್ಪಟ್ಟರೆ ಮತ್ತು ಯಾರೂ ಅವರೊಂದಿಗೆ ಆಟವಾಡಬಾರದು ಎಂದು ಹೇಳಿದರೆ, ಅದು ಯಾವುದೇ ರೀತಿಯಲ್ಲೂ ಒಳ್ಳೆಯ ಫಲಿತಾಂಶ ನೀಡುವುದಿಲ್ಲ. ಈ ವಿಷಯದಲ್ಲಿ ನಾವು ಹೃದಯ ವೈಶಾಲ್ಯ ಹೊಂದಬೇಕು ಹಾಗೂ ದೊಡ್ಡ ಮನಸ್ಸು ಮಾಡಬೇಕು ಎಂದು ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.

ಮುಸ್ತಾಫಿಜುರ್‌ರನ್ನು 9.20 ಕೋಟಿ ರುಪಾಯಿ ನೀಡಿ ಖರೀದಿಸಿದ್ದ ಕೆಕೆಆರ್
ಕಳೆದ ಡಿಸೆಂಬರ್‌ 16ರಂದು ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಎಡಗೈ ವೇಗಿ ಮುಸ್ತಾಫಿಜುರ್ ರಹಮಾನ್ ಅವರನ್ನು ಬರೋಬ್ಬರಿ 9.20 ಕೋಟಿ ನೀಡಿ ಖರೀದಿಸಿತ್ತು. ಇನ್ನು ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದಾಳಿಗಳಾಗುತ್ತಿರುವ ಬೆನ್ನಲ್ಲೇ ಇದೀಗ ಇದು ರಾಜಕೀಯ ತಿರುವು ಪಡೆದುಕೊಂಡಿದೆ. ಕೆಲವು ಬಿಜೆಪಿ ನಾಯಕರು ಹಾಗೂ ಶಿವಸೇನಾ ಪಕ್ಷದ ನಾಯಕರು ಬಾಂಗ್ಲಾದೇಶದ ಆಟಗಾರ ಮುಸ್ತಾಫಿಜುರ್ ರಹಮಾನ್ ಅವರನ್ನು ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ಫ್ರಾಂಚೈಸಿಯು ಕೈಬಿಡಬೇಕು ಎಂದು ಆಗ್ರಹಿಸಿದ್ದರು.

error: Content is protected !!