ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ ( IPL 2026) ಟೂರ್ನಿಯ ಪಂದ್ಯಗಳನ್ನು ಇನ್ನು ಮುಂದೆ ಬಾಂಗ್ಲಾದೇಶದಲ್ಲಿ ಪ್ರಸಾರ ಮಾಡುವುದಿಲ್ಲ ಎಂದು ಬಾಂಗ್ಲಾದೇಶ ಸರ್ಕಾರ ಹೇಳಿದೆ.
ಕ್ರಿಕೆಟಿಗ ಮುಸ್ತಾಫಿಝುರ್ ರೆಹಮಾನ್ ಅವರನ್ನು ಐಪಿಎಲ್ ಟೂರ್ನಿಯಿಂದ ತೆಗೆದುಹಾಕಿದ್ದರಿಂದ ಅಸಮಾಧಾನಗೊಂಡ ಬಾಂಗ್ಲಾದೇಶ ಸರ್ಕಾರ, ಇದಕ್ಕೆ ಪ್ರತಿಯಾಗಿ ಐಪಿಎಲ್ ಪಂದ್ಯಗಳ ಪ್ರಸಾರವನ್ನು ನಿಷೇಧಿಸಿದೆ.
ಬಾಂಗ್ಲಾದೇಶದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸೋಮವಾರ (ಜನವರಿ 5) ಎಲ್ಲಾ ಸ್ಥಳೀಯ ಟಿವಿಗಳಿಗೆ ಪತ್ರವೊಂದನ್ನು ಕಳುಹಿಸಿದ್ದು, ಐಪಿಎಲ್ ಪ್ರಸಾರದ ನಿಷೇಧದ ಬಗ್ಗೆ ತಿಳಿಸಿದೆ.
ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ಕ್ರೂರ ಹಿಂಸಾಚಾರದಿಂದಾಗಿ ಮುಸ್ತಾಫಿಝುರ್ ರೆಹಮಾನ್ ಅವರನ್ನು ಐಪಿಎಲ್ ತಂಡಕ್ಕೆ ಸೇರಿಸಿಕೊಳ್ಳುವುದರ ವಿರುದ್ಧ ಭಾರತದಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ಪ್ರತಿಭಟನೆ ಹಿಂಸಾತ್ಮಕ ತಿರುವು ಪಡೆಯುವುದನ್ನು ಗಮನಿಸಿದ ಬಿಸಿಸಿಐ, ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡುವಂತೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಕ್ಕೆ ಆದೇಶಿಸಿತು. ಬಿಸಿಸಿಐ ಆದೇಶದ ನಂತರ ರೆಹಮಾನ್ ಬಿಡುಗಡೆಯ ಬಗ್ಗೆ ಕೆಕೆಆರ್ ಮಾಹಿತಿ ನೀಡಿದೆ.
ಬಾಂಗ್ಲಾದೇಶ ಸರ್ಕಾರ ನಿಷೇಧ ಹೇರಿದ ಪತ್ರದಲ್ಲಿ ಏನಿದೆ?
ಬಾಂಗ್ಲಾದೇಶದ ವಾರ್ತಾಪತ್ರಿಕೆ ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ಪ್ರಕಾರ, ಬಾಂಗ್ಲಾದೇಶದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ದೇಶದ ಎಲ್ಲಾ ಟಿವಿ ಚಾನೆಲ್‌ಗಳಿಗೆ ಪತ್ರ ಕಳುಹಿಸಿದೆ. ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗ ಮುಸ್ತಾಫಿಝರ್ ರೆಹಮಾನ್ ಅವರನ್ನು ಐಪಿಎಲ್ ಟೂರ್ನಿಯ ಕೋಲ್ಕತ್ತಾ ನೈಟ್ ರೈಡರ್ಸ್‌ನಿಂದ ತೆಗೆದುಹಾಕುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನಿರ್ಧಾರವನ್ನು ಗಮನಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ನಿರ್ಧಾರಕ್ಕೆ ಯಾವುದೇ ಸರಿಯಾದ ಕಾರಣವನ್ನು ನೀಡಲಾಗಿಲ್ಲ ಮತ್ತು ಇದು ಬಾಂಗ್ಲಾದೇಶದ ಜನರ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ. ಈ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಸೂಚನೆ ಬರುವವರೆಗೂ ಐಪಿಎಲ್ ಪಂದ್ಯಗಳು ಮತ್ತು ಸಂಬಂಧಿತ ಕಾರ್ಯಕ್ರಮಗಳ ಪ್ರಸಾರವನ್ನು ನಿಲ್ಲಿಸುವಂತೆ ಸಚಿವಾಲಯ ಟಿವಿ ಚಾನೆಲ್‌ಗಳಿಗೆ ನಿರ್ದೇಶನ ನೀಡುತ್ತಿದೆ.

