Friday, January 9, 2026

ಅದ್ಧೂರಿಯಾಗಿ ನಡೆಯಿತು ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ ಲಕ್ಷಾಂತರ ಭಕ್ತಗಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ ಇಂದು ಅದ್ದೂರಿಯಾಗಿ ನೆರವೇರಿತು.

ಶ್ರೀ ಗವಿಸಿದ್ಧೇಶ್ವರ ಮಹಾ ರಥೋತ್ಸವವೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸೋಮವಾರ ಸೂರ್ಯಾಸ್ತ ಮುಳುಗುವ ಹೊತ್ತಿಗೆ ಅದ್ಧೂರಿಯಾಗಿ ಜರುಗಿತು. ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮೇಘಾಲಯ ರಾಜ್ಯದ ರಾಜ್ಯಪಾಲರಾಗಿರುವ ಕೊಪ್ಪಳ ಜಿಲ್ಲೆಯವರೇ ಆದ ಎಚ್. ವಿಜಯಶಂಕರ ಅವರು, ಬಸವಪಟ ಆರೋಹಣ ಮಾಡುವ ಮೂಲಕ ಚಾಲನೆ ರಥೋತ್ಸವಕ್ಕೆ ಚಾಲನೆ ನೀಡಿದರು.

ಕಿಕ್ಕಿರಿದು ತುಂಬಿದ್ದ ಭಕ್ತಾಧಿಗಳ ಕರಾಡತನದ ಗವಿಸಿದ್ದೇಶ ಪಾಯಿಮಾಮ ಘೋಷಣೆಯ ಮಧ್ಯೆ ರಥೋತ್ಸವ ಸಾಂಗವಾಗಿ ಪಾದಗಟ್ಟೆಯವರೆಗೆ ಮುಟ್ಟಿ ಬಳಿಕ ಮೂಲ ಸ್ಥಾನ ತಲುಪಿತು. ಪ್ರತಿ ವರ್ಷದಂತೆ ಈ ವರ್ಷದ ಜಾತ್ರೆಯಲ್ಲಿ ಗವಿಶ್ರೀಗಳು ಬಾಳೆ ಹಣ್ಣು ಎಸೆಯದಂತೆ ಭಕ್ತಾಧಿಗಳಲ್ಲಿ ಮನವಿ ಮಾಡಿದ್ದರಿಂದ ಜಿಲ್ಲೆಯಲ್ಲದೇ ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ್ದ ಭಕ್ತಾಧಿಗಳು ಉತ್ತತ್ತಿ ಎಸೆದು ಪುನೀತರಾದರು. ಕಳೆದ ಬಾರಿಗಿಂತ ಹೆಚ್ಚಿನ ಮಟ್ಟದಲ್ಲಿ ಅಂದಾಜು 6 ಲಕ್ಷಕ್ಕೂ ಅಧಿಕ ಭಕ್ತರು ಭಾಗಿಯಾಗಿದ್ದರು.

ಅಜ್ಜನ ಜಾತ್ರೆ ಮಾತ್ರ ಪ್ರಸಿದ್ಧವಾಲ್ಲ, ಇಲ್ಲಿನ ದಾಸೋಹ ಕೂಡ ಜಗತ್ಪ್ರಸಿದ್ಧ. ಈ ಬಾರಿ ದಾಖಲೆ ಪ್ರಮಾಣದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸರಿಸುಮಾರು 25 ಲಕ್ಷ ಜೋಳದ ರೊಟ್ಟಿ, 20‌ ಲಕ್ಷ ಮೈಸೂರು ಪಾಕ್, 500 ಕ್ವಿಂಟಾಲ್ ಮಾದಲಿ ಹಾಗೂ ಹತ್ತಾರು ಬಗೆಯ ಪಲ್ಯಗಳನ್ನ ಖುದ್ಧು ಭಕ್ತರೇ ವ್ಯವಸ್ಥೆ ಮಾಡಿದ್ದರು.

ಜಿಲ್ಲಾಡಳಿತ ಹಾಗೂ ಮಠದ ಸ್ವಯಂಸೇವಕರು ಶಿಸ್ತಿನ ವ್ಯವಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು. ಅಜ್ಜನ ಪಾದಸ್ಪರ್ಶ ಮಾಡಿ, ಮಹಾಪ್ರಸಾದ ಸ್ವೀಕರಿಸಿ ಭಕ್ತರು ಪುನೀತರಾದರು.

error: Content is protected !!