ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೇಳೋರು ಕೇಳೋರು ಇಲ್ಲದ ಜಾಗ ಕಂಡ ತಕ್ಷಣ ಅದನ್ನು ಕಸದ ರಾಶಿ ಮಾಡೋದಕ್ಕೆ ಬೆಂಗಳೂರಿನ ಜನರಿಗೆ ಜಾಸ್ತಿ ದಿನ ಬೇಕಾಗಿಲ್ಲ! ಪಕ್ಕದ ಮನೆ ಮುಂದೆ ಜಾಗ ಇದ್ದರೆ ಅವರು ಏಳೋಕೆ ಮುನ್ನವೇ ಕಸ ಹಾಕಿ ಹೋಗೋಕೆ ಜನ ಹೇಸೋದಿಲ್ಲ. ಇನ್ನು ರಸ್ತೆಗಳಂತು ನಮ್ಮವಲ್ಲ, ಒಬ್ಬರು ಕಸ ಹಾಕಿದ್ರೆ ಆಯ್ತು, ಎರಡೇ ದಿನದಲ್ಲಿ ಅದೊಂದು ಓಪನ್ ಡಸ್ಟ್‌ಬಿನ್ ಆಗಿಬಿಡುತ್ತದೆ.
ಇಂಥ ಬೆಂಗಳೂರಿನ ಜನರಿಗೆ ಬುದ್ಧಿಕಲಿಸೋಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಾಡಿರುವ ಪ್ಲ್ಯಾನ್ ವರ್ಕೌಟ್ ಆಗಿದೆ. ಕಸ ಎಸೆದ ಜನರ ಮನೆ ಮುಂದೆಯೇ ಆ ಕಸವನ್ನು ಎಸೆಯಲಾಗುತ್ತಿದೆ. ಜಿಬಿಎ ಮಾರ್ಷಲ್ಗಳು ನಿನ್ನೆ ಗುರುವಾರ ಭರ್ಜರಿ ಕಾರ್ಯಾಚರಣೆಯನ್ನೇ ಆರಂಭಿಸಿದ್ದಾರೆ.
ನಿನ್ನೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಬರುವ 218 ಮನೆಗಳ ಮುಂದೆ ಕಸ ಸುರಿದಿದ್ದು, 2.80 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಬೆಂಗಳೂರಿನ ಗಾಂಧಿನಗರ ವಾರ್ಡ್ ನಂಬರ್ 94 ರಲ್ಲಿ ವಾಸವಾಗಿರುವ ಮನೆಯವರು ರಸ್ತೆ ಬದಿ ಕಸ ಎಸೆದು ಬಂದಿದ್ದರು. ಇದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ ಪಾಲಿಕೆ ಮಾರ್ಷೆಲ್‌ಗಳು, ಕಸವನ್ನು ಅವರ ಮನೆ ಮುಂದೆಯೇ ಸುರಿದಿದ್ದಾರೆ. ಹೀಗೆ ಇದೇ ಏರಿಯಾದಲ್ಲಿ ಹತ್ತಾರು ಮನೆಗಳ ಮುಂದೆ ಕಸ ಸುರಿದು, ಜತೆಗೆ ತಲಾ 1 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಮಲ್ಲೇಶ್ವರ, ಹೊಸಕೆರೆಹಳ್ಳಿ, ಬನಶಂಕರಿ, ಮಹದೇವಪುರ ಸೇರಿದಂತೆ ಹಲವೆಡೆ ಕಸ ಎಸೆಯುವವರನ್ನು ಮಾರ್ಷಲ್‌ಗಳ ಮೂಲಕ ಪತ್ತೆಹಚ್ಚಿದ್ದ ಜಿಬಿಎ, ಎಲ್ಲೆಂದರಲ್ಲಿ ಕಸ ಎಸೆದ 218 ಜನರ ಮನೆಗಳ ಮುಂದೆ ಕಸ ಸುರಿದು ಜಾಗೃತಿ ಮೂಡಿಸಿದೆ. ಅಲ್ಲದೇ ಕಸ ಎಸೆದವರ ಬಳಿ ತಲಾ ಸಾವಿರ ರೂಪಾಯಿ ದಂಡ ವಸೂಲಿ ಮಾಡಿದೆ.
ಆರಂಭದಲ್ಲಿ ಒಂದು ಸಾವಿರ ದಂಡ ವಿಧಿಸುತ್ತಿರುವ ಜಿಬಿಎ, ಮತ್ತೆ ಕಸ ಹಾಕಿದರೆ, ಮತ್ತೊಂದು ಶಾಕ್ ಕೊಡಲು ಮುಂದಾಗಿದೆ. 10 ಸಾವಿರದವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

