February 21, 2026
Saturday, February 21, 2026
spot_img

ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಜಿಯೋ-ಶಿಕ್ಷಾ ಕ್ರಾಂತಿ! ಕ್ಲಾಸ್‌ರೂಮ್ ಈಗ ಮತ್ತಷ್ಟು ಹೈಟೆಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ನಡೆಯುತ್ತಿರುವ ‘ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ’ಯಲ್ಲಿ ಎಲ್ಲರ ಕಣ್ಣು ಜಿಯೋ ಪೆವಿಲಿಯನ್‌ನತ್ತ ನೆಟ್ಟಿದೆ. ಇದಕ್ಕೆ ಕಾರಣ, ಶಿಕ್ಷಣದ ಹಳೆಯ ಪದ್ಧತಿಯನ್ನೇ ಬದಲಿಸಲು ಸಜ್ಜಾಗಿರುವ ‘ಜಿಯೋ-ಶಿಕ್ಷಾ’ ಮಾದರಿ. ಇದು ಕೇವಲ ತಾಂತ್ರಿಕ ಪ್ರದರ್ಶನವಲ್ಲ, ಬದಲಿಗೆ ಭಾರತದ 25 ಕೋಟಿ ವಿದ್ಯಾರ್ಥಿಗಳ ಬದುಕನ್ನು ಸುಲಭಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.

ಜಿಯೋ-ಶಿಕ್ಷಾ ವ್ಯವಸ್ಥೆಯು ಮುಖ್ಯವಾಗಿ ಎರಡು ಡಿಜಿಟಲ್ ಸಾಧನಗಳ ಮೇಲೆ ನಿಂತಿದೆ:

ಜಿಯೋ ಇ-ಬೋರ್ಡ್: ಶಿಕ್ಷಕರು ತರಗತಿಯಲ್ಲಿ ಈ ಡಿಜಿಟಲ್ ಬೋರ್ಡ್ ಮೇಲೆ ಬರೆಯುವ ಪ್ರತಿಯೊಂದು ಅಕ್ಷರವೂ ತಕ್ಷಣವೇ ವಿದ್ಯಾರ್ಥಿಗಳ ಸಾಧನಕ್ಕೆ ತಲುಪುತ್ತದೆ.

ಜಿಯೋ ಇ-ಬುಕ್: ಇದು ಕೇವಲ ಪುಸ್ತಕವಲ್ಲ, ಇದರಲ್ಲಿ ವಿಡಿಯೋಗಳು, ರಸಪ್ರಶ್ನೆಗಳು ಮತ್ತು ಹೆಚ್ಚುವರಿ ಓದಿನ ಸಾಮಗ್ರಿಗಳಿರುತ್ತವೆ. ಇದು ಮಕ್ಕಳ ಬೆನ್ನ ಮೇಲಿನ ಭಾರವಾದ ಪಠ್ಯಪುಸ್ತಕಗಳ ಹೊರೆಯನ್ನು ಇಳಿಸಲಿದೆ.

ಈ ವ್ಯವಸ್ಥೆಯ ವಿಶೇಷವೆಂದರೆ ಇದರ AI ಬೋಧಕರು. ವಿದ್ಯಾರ್ಥಿಗಳು ತಮಗೆ ಅರ್ಥವಾಗದ ವಿಷಯಗಳನ್ನು ತಮ್ಮದೇ ಭಾಷೆಯಲ್ಲಿ, ತಮಗೆ ಬೇಕಾದ ಸಮಯದಲ್ಲಿ ಎಐ ಮೂಲಕ ಕೇಳಿ ತಿಳಿದುಕೊಳ್ಳಬಹುದು. ಇದರಿಂದ ಕೇವಲ ಬಾಯಿಪಾಠ ಮಾಡುವ ಸಂಸ್ಕೃತಿ ಹೋಗಿ, ವಿಷಯವನ್ನು ಅರ್ಥಮಾಡಿಕೊಂಡು ಕಲಿಯುವ ಪ್ರವೃತ್ತಿ ಬೆಳೆಯುತ್ತದೆ.

ಈ ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಶಿಕ್ಷಕರಿಗೂ ಸಹಕಾರಿ. ಪೇಪರ್ ತಿದ್ದುವ ಮತ್ತು ಅಂಕಪಟ್ಟಿ ತಯಾರಿಸುವ ಆಡಳಿತಾತ್ಮಕ ಕೆಲಸಗಳ ಹೊರೆ ಶಿಕ್ಷಕರಿಗೆ ಕಡಿಮೆಯಾಗಲಿದೆ. ಮಗು ಎಷ್ಟು ಕಲಿಯುತ್ತಿದೆ ಎಂಬ ವರದಿಯನ್ನು ಪೋಷಕರು ಮತ್ತು ಪ್ರಾಂಶುಪಾಲರು ತಮ್ಮ ಮೊಬೈಲ್‌ನಲ್ಲೇ ನೇರವಾಗಿ ನೋಡಬಹುದು.

ಸದ್ಯ ಕೆಲವು ಆಯ್ದ ಶಾಲೆಗಳಲ್ಲಿ ಮಾತ್ರ ಪ್ರಾಯೋಗಿಕವಾಗಿ ಜಾರಿಯಲ್ಲಿರುವ ಈ ಮಾದರಿಯು, ಮುಂಬರುವ ದಿನಗಳಲ್ಲಿ ಭಾರತದ ಶಾಲೆಗಳನ್ನು ‘ಎಐ-ಚಾಲಿತ ಕಲಿಕಾ ಕೇಂದ್ರಗಳನ್ನಾಗಿ’ ಪರಿವರ್ತಿಸುವ ಗುರಿ ಹೊಂದಿದೆ. ಇದು ಶಿಕ್ಷಣವನ್ನು ಹೆಚ್ಚು ಸುರಕ್ಷಿತ, ವೈಯಕ್ತಿಕ ಮತ್ತು ಎಲ್ಲರಿಗೂ ಸುಲಭವಾಗಿ ಸಿಗುವಂತೆ ಮಾಡುವುದರಲ್ಲಿ ಸಂಶಯವಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !