ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಡಪ ಜಿಲ್ಲೆಯ ಸಮೀಪ ತಿರುಮಲ ತಿರುಪತಿ ದೇವಸ್ಥಾನಕ್ಕೆ ಸಾಗಿಸುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿಯಾದ ಘಟನೆ ಬಳಿಕ ಶ್ರೀವಾರಿ ಲಡ್ಡು ಪ್ರಸಾದ ತಯಾರಿಕೆಗೆ ತುಪ್ಪದ ಕೊರತೆ ಉಂಟಾಗಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು. ಆದರೆ ಈ ಬಗ್ಗೆ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ (TTD) ಸ್ಪಷ್ಟನೆ ನೀಡಿದೆ.
ದೇವಸ್ಥಾನದಲ್ಲಿ ಪ್ರಸಾದ ತಯಾರಿಕೆಗೆ ಅಗತ್ಯವಿರುವಷ್ಟು ಹಸುವಿನ ತುಪ್ಪದ ಸಂಗ್ರಹ ಈಗಾಗಲೇ ಲಭ್ಯವಿದೆ. ಲಡ್ಡು ತಯಾರಿಕೆ ಹಾಗೂ ವಿತರಣಾ ಪ್ರಕ್ರಿಯೆ ಎಂದಿನಂತೆ ಮುಂದುವರಿಯುತ್ತಿದೆ ಎಂದು ಆಡಳಿತ ಮಂಡಳಿ ಹೇಳಿದೆ. ಲಡ್ಡು ಪ್ರಸಾದಕ್ಕೆ ಬೇಕಾಗುವ ತುಪ್ಪವನ್ನು ಮೂರು ಹಂತದ ಖರೀದಿ ವ್ಯವಸ್ಥೆಯ ಮೂಲಕ ವಿವಿಧ ಸಂಸ್ಥೆಗಳಿಂದ ಪಡೆಯಲಾಗುತ್ತದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ:
ಕಡಪ ಜಿಲ್ಲೆಯ ಜಮ್ಮಲಮಡುಗು ಕ್ಷೇತ್ರದ ಕೊಂಡಾಪುರಂ ಮಂಡಲದ ಚಿತ್ರಾವತಿ ಸೇತುವೆ ಬಳಿ ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಅಪಘಾತಕ್ಕೀಡಾಗಿ ಸುಮಾರು 21 ಸಾವಿರ ಲೀಟರ್ ತುಪ್ಪದಲ್ಲಿ ಹೆಚ್ಚಿನ ಪ್ರಮಾಣದ ತುಪ್ಪ ಸೋರಿಕೆಯಾಗಿದೆ ಎಂದು ವರದಿಯಾಗಿದೆ.
ಘಟನೆ ಬಳಿಕ ಸ್ಥಳೀಯರು ಟಿನ್, ಬಕೆಟ್ ಹಾಗೂ ಬಾಟಲಿಗಳಲ್ಲಿ ತುಪ್ಪವನ್ನು ತುಂಬಿಕೊಂಡು ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಪೊಲೀಸರು ಸ್ಥಳಕ್ಕೆ ಆಗಮಿಸುವ ಮೊದಲು ಬಹಳಷ್ಟು ತುಪ್ಪವನ್ನು ಜನರು ತೆಗೆದುಕೊಂಡು ಹೋಗಿದ್ದರೆಂದು ತಿಳಿದುಬಂದಿದೆ.



