ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಓಂಕಾರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಹುಲಿ ಸಂಚಾರ ಮಿತಿಮೀರಿದೆ. ಇತ್ತೀಚೆಗೆ ಕುರುಬರಹುಂಡಿ ಮತ್ತು ಬೆಲಚಲವಾಡಿ ಗ್ರಾಮಗಳ ರಸ್ತೆಯಲ್ಲಿ ಮುಂಜಾನೆ ಹೊತ್ತಿನಲ್ಲಿ ಬೃಹತ್ ಗಾತ್ರದ ಹುಲಿಯು ಪ್ರತ್ಯಕ್ಷವಾಗಿ ರೈತ ಸಮುದಾಯದಲ್ಲಿ ತೀವ್ರ ಆತಂಕ ಮೂಡಿಸಿದೆ.
ಗ್ರಾಮಗಳ ನಡುವಿನ ಜಮೀನುಗಳ ಹಾದಿಯಲ್ಲಿ ಹುಲಿ ನಡೆದುಕೊಂಡು ಸಾಗಿದ್ದು, ರೈತನೊಬ್ಬ ಕೇವಲ 500 ಅಡಿಗಳಷ್ಟು ಹತ್ತಿರದಿಂದ ಹುಲಿಯ ಚಲನವಲನವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಆದರೆ, ಹುಲಿ ಹಿಂತಿರುಗಿ ರೈತರ ಕಡೆ ಬರುತ್ತಿದ್ದಂತೆ ಗಾಬರಿಗೊಂಡ ರೈತರು ದಿಕ್ಕಾಪಾಲಾಗಿ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಈ ವೀಡಿಯೊ ಈಗ ವೈರಲ್ ಆಗಿದೆ.
ಹುಲಿಯು ತಮ್ಮ ಜಮೀನುಗಳ ಸಮೀಪ ನಿರಂತರವಾಗಿ ಸಂಚರಿಸುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಅಡ್ಡಿಯುಂಟಾಗಿದೆ. ಕೂಡಲೆ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು, ತಕ್ಷಣವೇ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಹುಲಿಯನ್ನು ಪತ್ತೆ ಹಚ್ಚಿ ಅದನ್ನು ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯಕ್ಕೆ ಬಿಡುವಂತೆ ಸ್ಥಳೀಯ ರೈತರು ಮತ್ತು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

