ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಟೋಬರ್ 19ರಿಂದ ಪರ್ತ್‌ನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಗೆ ಭಾರತೀಯ ಕ್ರಿಕೆಟ್ ತಂಡವನ್ನು ಬಿಸಿಸಿಐ ಶನಿವಾರ ಅಧಿಕೃತವಾಗಿ ಪ್ರಕಟಿಸಿದೆ. ಈ ಸರಣಿಯಲ್ಲಿ ಯುವ ನಾಯಕ ಶುಭ್‌ಮನ್ ಗಿಲ್ ಟೀಮ್ ಇಂಡಿಯಾಗೆ ನಾಯಕತ್ವ ವಹಿಸಲಿದ್ದು, ಶ್ರೇಯಸ್ ಅಯ್ಯರ್ ಉಪನಾಯಕನಾಗಿ ನೇಮಕಗೊಂಡಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆರು ತಿಂಗಳ ಬಳಿಕ ಮತ್ತೆ ಕಣಕ್ಕಿಳಿಯಲಿದ್ದಾರೆ.
ರೋಹಿತ್ ಶರ್ಮಾ ಏಕದಿನ ನಾಯಕತ್ವವನ್ನು ಕಳೆದುಕೊಂಡಿರುವುದು ಪ್ರಮುಖ ಬೆಳವಣಿಗೆಯಾಗಿದೆ. 2027ರ ಏಕದಿನ ವಿಶ್ವಕಪ್ ವೇಳೆಗೆ ಅವರ ಸ್ಥಾನ ಖಚಿತವಾಗದಿರುವುದರಿಂದ, ಮುಂಚಿತವಾಗಿಯೇ ಹೊಸ ನಾಯಕನನ್ನು ಬೆಳೆಸುವುದು ತಂಡದ ತಂತ್ರದ ಭಾಗವಾಗಿದೆ. ರೋಹಿತ್ ಅವರ ಫಿಟ್‌ನೆಸ್ ಹಾಗೂ ಫಾರ್ಮ್ ಮುಂದಿನ ಎರಡು ವರ್ಷಗಳವರೆಗೆ ನಿರಂತರವಾಗಿರದಿದ್ದರೆ, ಭಾರತವು ವಿಶ್ವಕಪ್‌ನಲ್ಲಿ ಅನುಭವವಿಲ್ಲದ ನಾಯಕನೊಂದಿಗೆ ಕಣಕ್ಕಿಳಿಯಬೇಕಾಗುವ ಅಪಾಯವಿತ್ತು. ಅದಕ್ಕಾಗಿ ಗಿಲ್‌ಗೆ ಈಗಲೇ ನಾಯಕತ್ವ ಹಸ್ತಾಂತರಿಸಲಾಗಿದೆ.
ಗಾಯಗಳಿಂದಾಗಿ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ತಂಡದಿಂದ ಹೊರಗುಳಿದಿದ್ದಾರೆ. ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದ್ದು, ಪಾಂಡ್ಯ ಬದಲಿಗೆ ನಿತೀಶ್ ಕುಮಾರ್ ರೆಡ್ಡಿ ಆಲ್‌ರೌಂಡರ್ ಆಗಿ ಅವಕಾಶ ಪಡೆದಿದ್ದಾರೆ.
ಮೂರು ಪಂದ್ಯಗಳ ಸರಣಿಗೆ ವಿಕೆಟ್‌ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಲಾಗಿಲ್ಲ. ಅವರ ಬದಲಿಗೆ ಯುವ ವಿಕೆಟ್‌ಕೀಪರ್ ಧ್ರುವ್ ಜುರೆಲ್ ಬ್ಯಾಕಪ್ ಕೀಪರ್ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಯಶಸ್ವಿ ಜೈಸ್ವಾಲ್ ಮತ್ತು ಮೊಹಮ್ಮದ್ ಸಿರಾಜ್ ಮರಳಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತ ಏಕದಿನ ತಂಡ
ಶುಭ್‌ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್‌ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಧ್ರುವ್ ಜುರೆಲ್ (ವಿಕೆಟ್‌ಕೀಪರ್).