ಹೊಸದಿಗಂತ ಡಿಜಿಟಲ್ ಡೆಸ್ಕ್:
ನಂಬಿಕೆಯೇ ದೊಡ್ಡ ಧೈರ್ಯ, ಆದರೆ ಕೆಲವೊಮ್ಮೆ ಅದೇ ಜೀವಕ್ಕೆ ಕಂಟಕವಾಗುತ್ತದೆ. ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಒಂದು ಘಟನೆ ಪೋಷಕರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ಉದಾಹರಣೆಯಾಗಿದೆ. ಬಾಡಿಗೆಗೆ ವಾಸವಾಗಿದ್ದ ದಂಪತಿಯ ಅಪ್ರಾಪ್ತ ಮಗಳ ಮೇಲೆ ಮಾಲೀಕನೇ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ.
ಮಗಳಿಗೆ ಹುಷಾರಿಲ್ಲ ಅಂತ ಪೋಷಕರು ಪಕ್ಕದ ಮನೆಯಲ್ಲಿದ್ದ ಮಹಿಳೆಯೊಬ್ಬರ ಮನೆಯಲ್ಲಿ ಬಾಲಕಿಯನ್ನ ಬಿಟ್ಟು ಹೋಗಿದ್ದಾರೆ. ಈ ವೇಳೆ ಮನೆ ಮಾಲೀಕ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ಬಳಸಿಕೊಂಡ ಮಾಲೀಕ ಚಂದ್ರಶೇಖರ, ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.
ಘಟನೆ ನಂತರ ಬಾಲಕಿ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯಕೀಯ ಪರೀಕ್ಷೆಯಲ್ಲೇ ದೌರ್ಜನ್ಯದ ಸತ್ಯ ಬೆಳಕಿಗೆ ಬಂದಿದ್ದು, ತಕ್ಷಣವೇ ಪೋಷಕರು ದೂರು ನೀಡಿದ್ದಾರೆ.
ಪೊಲೀಸರು ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಮಾಲೀಕ ಚಂದ್ರಶೇಖರ ಮತ್ತು ಸಹಕಾರ ನೀಡಿದ ಮಹಿಳೆ ಮಂಜೂರಾಳನ್ನು ಬಂಧಿಸಿದ್ದು, ಪೋಕ್ಸೋ ಮತ್ತು ಎಸ್ಸಿ-ಎಸ್ಟಿ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

