Wednesday, January 28, 2026
Wednesday, January 28, 2026
spot_img

ರಸ್ತೆ ಕೊಡಿ ಇಲ್ಲವೇ ಮತ ಕೇಳಲು ಬರಬೇಡಿ!: ಅಂಕೋಲಾ ಗುಡ್ಡಗಾಡು ಜನರ ‘ಬಹಿಷ್ಕಾರ’ದ ಎಚ್ಚರಿಕೆ!

ಹೊಸದಿಗಂತ ಅಂಕೋಲಾ:

ಆಧುನಿಕ ಜಗತ್ತು ಮಂಗಳನತ್ತ ಮುಖ ಮಾಡಿದ್ದರೆ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೆಲ ಗ್ರಾಮಗಳು ಮಾತ್ರ ಇಂದಿಗೂ ಆದಿಮಕಾಲದ ಬದುಕನ್ನೇ ನಡೆಸುತ್ತಿವೆ. ಹಟ್ಟಿಕೇರಿ ಪಂಚಾಯತ್ ವ್ಯಾಪ್ತಿಯ ಗುಳೆ, ಕೆಂದಿಗೆ, ಮಲೆಗದ್ದೆ, ಲಕ್ಕಿಗುಳಿ, ಶಿಕಳಿ ಹಾಗೂ ತುರ್ಲಿ ಗ್ರಾಮಗಳು ಇಂದಿಗೂ ಒಂದು ಸುಸಜ್ಜಿತ ರಸ್ತೆಯನ್ನು ಕಾಣದೆ ಅಕ್ಷರಶಃ ನರಕಯಾತನೆ ಅನುಭವಿಸುತ್ತಿವೆ.

ಸುಮಾರು 350ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಗ್ರಾಮಗಳಲ್ಲಿ ಕೃಷಿಯೇ ಪ್ರಧಾನ ವೃತ್ತಿ. ಆದರೆ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತರಲು ಅಥವಾ ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ ಆಸ್ಪತ್ರೆಗೆ ಸೇರಿಸಲು ಇಲ್ಲಿ ರಸ್ತೆಗಳೇ ಇಲ್ಲ. ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಕಂಬಳಿಯಲ್ಲಿ ಹೊತ್ತು ಕಡಿದಾದ ದಾರಿಯಲ್ಲಿ ಮೈಲುಗಟ್ಟಲೆ ಸಾಗಬೇಕಾದ ಅಮಾನವೀಯ ಸ್ಥಿತಿ ಇಂದಿಗೂ ಮುಂದುವರಿದಿದೆ.

ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಜಿ. ನಾಯ್ಕ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ. “ರಸ್ತೆ ಅಭಿವೃದ್ಧಿಗೆ ಕೈಗಾ ಅಣು ವಿದ್ಯುತ್ ಸ್ಥಾವರದವರು ಕಳೆದ ಜೂನ್ ತಿಂಗಳಲ್ಲೇ (11-06-2025) ಪತ್ರ ಬರೆದು ಒಪ್ಪಿಗೆ ನೀಡಿದ್ದಾರೆ. ಆದರೆ 7 ತಿಂಗಳು ಕಳೆದರೂ ಅರಣ್ಯ ಅಥವಾ ಇತರ ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ಕಾಮಗಾರಿ ಆರಂಭವಾಗಿಲ್ಲ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಇಲಾಖೆಗಳ ನಡುವಿನ ಕಾಗದದ ವ್ಯವಹಾರದ ನಡುವೆ ಜನರ ಬದುಕು ಹಸಿಗೆಡುತ್ತಿದೆ. ಜಿಲ್ಲಾಡಳಿತ ತಕ್ಷಣವೇ ಮಧ್ಯಪ್ರವೇಶಿಸಿ ಈ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಬೇಕು. ಶೀಘ್ರವಾಗಿ ರಸ್ತೆ ಕಾಮಗಾರಿ ಆರಂಭವಾಗದಿದ್ದರೆ ಮುಂಬರುವ ಚುನಾವಣೆಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !