Tuesday, September 30, 2025

ಅಭ್ಯಾಸದ ವೇಳೆ ಗಾಯ ಮಾಡ್ಕೊಂಡ ಗ್ಲೆನ್ ಮ್ಯಾಕ್ಸ್‌ವೆಲ್: ಟಿ20 ಸರಣಿಯಿಂದ ಔಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಕ್ಟೋಬರ್ 19ರಿಂದ ಆರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಸರಣಿಗೆ ಮೊದಲು ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಆಘಾತ ತಲುಪಿದೆ. ಸ್ಫೋಟಕ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅಭ್ಯಾಸದ ವೇಳೆ ಗಂಭೀರ ಗಾಯಗೊಂಡಿದ್ದಾರೆ. ಮುಂಗೈ ಮುರಿತಕ್ಕೊಳಗಾದ ಮ್ಯಾಕ್ಸ್‌ವೆಲ್ ಈಗಾಗಲೇ ನ್ಯೂಝಿಲೆಂಡ್ ವಿರುದ್ಧ ನಡೆಯಲಿರುವ ಟಿ20 ಸರಣಿಯಿಂದ ಹೊರಗುಳಿದಿದ್ದು, ಭಾರತ ಪ್ರವಾಸಕ್ಕೂ ಅನುಮಾನ ವ್ಯಕ್ತವಾಗಿದೆ.

ಸೆಪ್ಟೆಂಬರ್ 30ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ ನ್ಯೂಝಿಲೆಂಡ್-ಆಸ್ಟ್ರೇಲಿಯಾ ಟಿ20 ಸರಣಿಯಲ್ಲಿ ಮ್ಯಾಕ್ಸ್‌ವೆಲ್ ಕಾಣಿಸಿಕೊಳ್ಳುವುದಿಲ್ಲ. ಅಭ್ಯಾಸದ ವೇಳೆ ಸಂಭವಿಸಿದ ಗಾಯದ ಕಾರಣ ಅವರಿಗೆ ಸಂಪೂರ್ಣ ವಿಶ್ರಾಂತಿ ನೀಡಲಾಗಿದೆ.

ಭಾರತದ ವಿರುದ್ಧ ನಡೆಯಲಿರುವ 3 ಏಕದಿನ ಮತ್ತು 5 ಟಿ20 ಪಂದ್ಯಗಳ ಸರಣಿಯಲ್ಲಿ ಮ್ಯಾಕ್ಸ್‌ವೆಲ್ ಆಡುವ ಸಾಧ್ಯತೆ ಅತೀ ಕಡಿಮೆ. ಹೀಗಾಗಿ ಆಸೀಸ್ ತಂಡವು ಮುಂದಿನ 8 ಟಿ20 ಪಂದ್ಯಗಳನ್ನು ಅವರಿಲ್ಲದೆ ಆಡಬೇಕಾಗುವ ಪರಿಸ್ಥಿತಿ ಉಂಟಾಗಿದೆ.

ನವೆಂಬರ್ 2ರಂದು ಭಾರತ-ಆಸ್ಟ್ರೇಲಿಯಾ ಸರಣಿ ಮುಗಿಯಲಿದೆ. ಫೆಬ್ರವರಿಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಮ್ಯಾಕ್ಸ್‌ವೆಲ್ ಸಂಪೂರ್ಣವಾಗಿ ಚೇತರಿಸಿಕೊಳ್ಳುವುದು ಅತ್ಯಂತ ಅಗತ್ಯ. ಇಲ್ಲದಿದ್ದರೆ ಆಸೀಸ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ.