ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಕಿನ ಹಬ್ಬ ದೀಪಾವಳಿ ಭಾರತದ ಸಾಂಸ್ಕೃತಿಕ ಹಿರಿಮೆ ಮತ್ತು ಉದಾತ್ತತೆಯ ಪ್ರತೀಕ. ಸರ್ವಜನಾಂಗಗಳು ಕೂಡಿ ಆಚರಿಸುವ ವಿಶೇಷ ಹಬ್ಬವು ಯುನೆಸ್ಕೋದ (UNESCO) ‘ಅಮೂರ್ತ ಸಾಂಸ್ಕೃತಿಕ ಪಾರಂಪರಿಕ ಪಟ್ಟಿ’ಯಲ್ಲಿ ಸ್ಥಾನ ಪಡೆಯುವ ಮೂಲಕ ಜಾಗತಿಕ ಮನ್ನಣೆ ಪಡೆದಿದೆ.
ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಆಚರಿಸುವ ಹಬ್ಬ, ಆಚರಣೆ ಮತ್ತು ವಿಶೇಷ ಸ್ಥಳಗಳನ್ನು ಗುರುತಿಸುತ್ತದೆ. ಅದರಂತೆ ಭಾರತದಲ್ಲಿ ಆಚರಿಸುವ ದೀಪಾವಳಿಯನ್ನು ತನ್ನ ಅಮೂರ್ತ ಸಾಂಸ್ಕೃತಿಕ ಪಾರಂಪರಿಕ ಪಟ್ಟಿಗೆ ಸೇರಿಸಿ ಘೋಷಿಸಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಯುನೆಸ್ಕೋ, “ವಿಶಿಷ್ಟ ಹಬ್ಬವಾದ ದೀಪಾವಳಿಯನ್ನು ಅಮೂರ್ತ ಸಾಂಸ್ಕೃತಿಕ ಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ. ಅಭಿನಂದನೆಗಳು ಭಾರತ” ಎಂದು ತಿಳಿಸಿದೆ.

