Friday, December 12, 2025

ಗೋವಾ ಅಗ್ನಿ ದುರಂತ: ಥಾಯ್ಲೆಂಡ್‌ನಲ್ಲಿ ನೈಟ್‌ಕ್ಲಬ್ ಮಾಲೀಕ ಲೂಥ್ರಾ ಸಹೋದರರು ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಗೋವಾದ ಅರ್ಪೋರಾ ನೈಟ್‌ಕ್ಲಬ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ನೈಟ್‌ಕ್ಲಬ್ ಮಾಲೀಕರು, ಗೌರವ್ ಲೂಥ್ರಾ ಮತ್ತು ಸೌರಭ್ ಲೂಥ್ರಾ ಸಹೋದರರನ್ನು ಥಾಯ್ಲೆಂಡ್‌ನಲ್ಲಿ ಬಂಧಿಸಲಾಗಿದೆ. ಈ ದುರಂತದಲ್ಲಿ 25 ಅಮೂಲ್ಯ ಜೀವಗಳು ಬಲಿಯಾಗಿದ್ದವು.

ಗೋವಾ ಪೊಲೀಸರು ಲೂಥ್ರಾ ಸಹೋದರರ ವಿರುದ್ಧ ‘ಲುಕ್ ಔಟ್ ನೋಟಿಸ್’ ಹೊರಡಿಸಿದ ಬಳಿಕ, ಇಂಟರ್‌ಪೋಲ್‌ನಿಂದ ‘ಬ್ಲೂ ಕಾರ್ನರ್ ನೋಟಿಸ್’ ಜಾರಿಯಾಗಿತ್ತು. ಇದರ ಬೆನ್ನಲ್ಲೇ ಥಾಯ್ ಪೊಲೀಸರು ಇಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧನದ ಬಳಿಕ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪ್ರಕರಣದ ಹಿನ್ನೆಲೆ:

ಡಿಸೆಂಬರ್ 6ರ ಮಧ್ಯರಾತ್ರಿ ಅರ್ಪೋರಾ ನೈಟ್‌ಕ್ಲಬ್‌ನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯಾದ ತಕ್ಷಣ ಲೂಥ್ರಾ ಸಹೋದರರು ದೇಶದಿಂದ ಪರಾರಿಯಾಗಿ ಥಾಯ್ಲೆಂಡ್‌ಗೆ ತೆರಳಿದ್ದರು ಎನ್ನಲಾಗಿದೆ. ಗೋವಾ ಸರ್ಕಾರದ ವಿನಂತಿಯ ಮೇರೆಗೆ ವಿದೇಶಾಂಗ ಸಚಿವಾಲಯವು ಕ್ರಮ ಕೈಗೊಂಡಿದ್ದರಿಂದ ಇಬ್ಬರು ಸಹೋದರರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಲಾಗಿತ್ತು.

ಪ್ರಸ್ತುತ ಬಂಧಿತ ಸಹೋದರರನ್ನು ಬ್ಯಾಂಕಾಕ್‌ನ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಗಿದ್ದು, ಶೀಘ್ರದಲ್ಲೇ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ಖಚಿತಪಡಿಸಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರು ಜನರನ್ನು ಬಂಧಿಸಲಾಗಿದೆ. ಗೋವಾ ಸರ್ಕಾರವು ಕಠಿಣ ಕ್ರಮಕ್ಕೆ ಮುಂದಾಗಿದ್ದು, ಲೂಥ್ರಾ ಸಹೋದರರ ಒಡೆತನದಲ್ಲಿದ್ದ ಮತ್ತೊಂದು ನೈಟ್‌ಕ್ಲಬ್ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ. ಅಲ್ಲದೆ, ಘಟನೆಗೆ ಸಂಬಂಧಿಸಿ ಮೂವರು ಹಿರಿಯ ಅಧಿಕಾರಿಗಳನ್ನು ಗೋವಾ ಮುಖ್ಯಮಂತ್ರಿಗಳು ಅಮಾನತುಗೊಳಿಸುವ ಆದೇಶವನ್ನೂ ಹೊರಡಿಸಿದ್ದಾರೆ.

error: Content is protected !!