Friday, December 19, 2025

ಗೋವಾ ನೈಟ್‌ಕ್ಲಬ್‌ ಅಗ್ನಿ ದುರಂತ: ಲೂತ್ರಾ ಸಹೋದರರನ್ನು ಥೈಲ್ಯಾಂಡ್​ನಿಂದ ದೆಹಲಿಗೆ ಕರೆತಂದ ಪೊಲೀಸರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೋವಾದ ಬಿರ್ಚ್​ ಬೈ ರೋಮಿಯೋ ನೈಟ್​ ಕ್ಲಬ್ ಮಾಲೀಕರಾದ ಸೌರಭ್ ಹಾಗೂ ಗೌರವ್ ಲೂತ್ರಾರನ್ನು ಥೈಲ್ಯಾಂಡ್​ನಿಂದ ದೆಹಲಿಗೆ ಕರೆತಂದಿದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದ ತಕ್ಷಣ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ.

ಡಿಸೆಂಬರ್ 6 ರಂದು ಸಂಭವಿಸಿದ ಅಗ್ನಿ ಅವಘಡದಲ್ಲಿ 25 ಜನರನ್ನು ಬಲಿ ಪಡೆದ ಗೋವಾ ನೈಟ್‌ಕ್ಲಬ್‌ನ ಸಹ-ಮಾಲೀಕರಾದ ಗೌರವ್ ಲುತ್ರಾ ಮತ್ತು ಸೌರಭ್ ಲುತ್ರಾ, ಅವಘಡದ ನಂತರ ಥೈಲ್ಯಾಂಡ್‌ನ ಫುಕೆಟ್‌ಗೆ ಪರಾರಿಯಾಗಿದ್ದರು. ಅವರ ವಿರುದ್ಧ ಇಂಟರ್‌ಪೋಲ್ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಯ್ ಸರ್ಕಾರದೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಭಾರತೀಯ ರಾಯಭಾರ ಕಚೇರಿಯ ಮಧ್ಯ ಪ್ರವೇಶದ ನಂತರ ಡಿಸೆಂಬರ್ 11 ರಂದು ಫುಕೆಟ್‌ನಲ್ಲಿ ಥಾಯ್ ಅಧಿಕಾರಿಗಳು ಈ ಇಬ್ಬರನ್ನು ಬಂಧಿಸಿದ್ದರು.

ಪ್ರಕರಣದಲ್ಲಿ ಮುಂದಿನ ಕಾನೂನು ಕ್ರಮಗಳಿಗಾಗಿ ಅವರನ್ನು ಇಂದು ಗಡೀರಪಾರು ಮಾಡಲಾಗಿದ್ದು, ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಇಂದು ಮಧ್ಯಾಹ್ನ ಗೌರವ್ ಲುತ್ರಾ ಮತ್ತು ಸೌರಭ್ ಲುತ್ರಾ ಅವರನ್ನು ಥೈಲ್ಯಾಂಡ್‌ನಿಂದ ದೆಹಲಿಗೆ ಕರೆತರಲಾಗಿದೆ.

ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಕ್ಷಣ ಅವರನ್ನು ಪೊಲೀಸರಿಗೆ ಹಸ್ತಾಂತರಿಸಲಾಯಿತು ಮತ್ತು ಹೆಚ್ಚಿನ ಕಾನೂನು ಕ್ರಮಗಳಿಗಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಈ ಇಬ್ಬರನ್ನು ದೆಹಲಿ ನ್ಯಾಯಾಲಯದ ಮುಂದೆ ಹಾಜರುಪಡಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

error: Content is protected !!