ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಗೋವಾವನ್ನು ಬೆಚ್ಚಿಬೀಳಿಸಿದ ಅರ್ಪೋರಾ ನೈಟ್‌ಕ್ಲಬ್ ಅಗ್ನಿ ದುರಂತ ಪ್ರಕರಣದಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಸುರಕ್ಷತಾ ನಿಯಮ ಉಲ್ಲಂಘನೆಯ ನಡುವೆಯೇ ನೈಟ್‌ಕ್ಲಬ್‌ಗೆ ಅನುಮತಿ ನೀಡಿದ್ದ ಆರೋಪದ ಮೇಲೆ ಮೂವರು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಗೋವಾ ಸರ್ಕಾರ ಆದೇಶ ಹೊರಡಿಸಿದೆ. ದುರಂತದಲ್ಲಿ 25 ಮಂದಿ ಸಜೀವ ದಹನಗೊಂಡಿರುವ ಹಿನ್ನೆಲೆ, ಈ ನಿರ್ಧಾರ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಸರ್ಕಾರಿ ಆದೇಶದ ಪ್ರಕಾರ, ಅಗತ್ಯ ಅಗ್ನಿ ಸುರಕ್ಷತಾ ಹಾಗೂ ಅನುಮತಿ ದಾಖಲೆಗಳಿಲ್ಲದಿದ್ದರೂ 2023ರಲ್ಲಿ ಕ್ಲಬ್‌ಗೆ ಕಾರ್ಯಾಚರಣೆಗೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಗೋವಾ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಡಾ. ಶಮಿಲಾ ಮಾಂಟೆರೋ, ಪಂಚಾಯತಿಗಳ ನಿರ್ದೇಶಕಿ ಸಿದ್ಧಿ ಹಲರ್ನ್ಕರ್ ಹಾಗೂ ಹಡ್‌ಫಡೆ–ನಾಗ್ವಾ ಪಂಚಾಯತ್ ಕಾರ್ಯದರ್ಶಿ ರಘುವೀರ್ ಬಗ್ಕರ್ ಅವರನ್ನು ಅಮಾನತುಗೊಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನೈಟ್‌ಕ್ಲಬ್‌ನ ಮುಖ್ಯ ಜನರಲ್ ಮ್ಯಾನೇಜರ್ ರಾಜೀವ್ ಮೋಡಕ್, ಮ್ಯಾನೇಜರ್ ವಿವೇಕ್ ಸಿಂಗ್ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕ್ಲಬ್ ಮಾಲೀಕರಾದ ಗೌರವ್ ಮತ್ತು ಸೌರಭ್ ಲುತ್ರಾ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದ್ದು, ಅವರನ್ನು ದೆಹಲಿಯಲ್ಲಿ ಪತ್ತೆ ಹಚ್ಚಲು ಗೋವಾ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಸ್ಥಳೀಯ ಸರಪಂಚ್ ರೋಷನ್ ರೆಡ್ಕರ್ ವಿಚಾರಣೆಯಲ್ಲಿದ್ದಾರೆ.

