Monday, November 17, 2025

ಗೋದಾವರಿ ಸಕ್ಕರೆ ಕಾರ್ಖಾನೆ ಬೆಂಕಿ ಪ್ರಕರಣ: 10 ಜನ ಪೊಲೀಸ್ ವಶಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಗಲಕೋಟೆ ಜಿಲ್ಲೆಯ ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ಅಕ್ಟೋಬರ್ 13ರಂದು ಸಂಭವಿಸಿದ್ದ ಬೆಂಕಿ ಘಟನೆ ಈಗ ಮತ್ತೊಂದು ಗಂಭೀರ ಹಂತಕ್ಕೆ ಕಾಲಿಟ್ಟಿದೆ. ಮುಧೋಳ ಹಾಗೂ ಸುತ್ತಮುತ್ತಲಿನ ರೈತರ ಪ್ರತಿಭಟನೆ, ಕಾರ್ಖಾನೆ ಮುತ್ತಿಗೆ ಮತ್ತು ಬಳಿಕ ನಡೆದ ಅಹಿತಕರ ಘಟನೆಗಳ ಪರಿಣಾಮವಾಗಿ ಪೊಲೀಸರು ಪ್ರಕರಣಕ್ಕೆ ಹೊಸ ದಿಕ್ಕು ನೀಡಿದ್ದಾರೆ.

ತೇರದಾಳ ಪಿಎಸ್‌ಐ ಶಿವಾನಂದ್ ಸಿಂಗನ್ನವರ ದೂರಿನ ಮೇರೆಗೆ ರೈತ ಸಂಘದ 17 ಜನರ ವಿರುದ್ಧ ಮಹಾಲಿಂಗಪುರ ಠಾಣೆಯಲ್ಲಿ ಮೊದಲ ಎಫ್‌ಐಆರ್ ದಾಖಲಾಗಿದೆ. ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ ಪ್ರಕರಣ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ, ಕಲ್ಲು ತೂರಾಟ, ವಾಹನ ದ್ವಂಸ ಸೇರಿದಂತೆ ಪ್ರಮುಖ ಆರೋಪಗಳು ದಾಖಲೆಯಾಗಿವೆ. ಇವರಲ್ಲಿ 10 ಮಂದಿಯನ್ನು ಪೊಲೀಸರು ತಡರಾತ್ರಿ ಬಂಧಿಸಿದ್ದು, ಸಿದ್ದಪ್ಪ ಬಳಗಾನೂರ, ಮಲ್ಲು ಮೆಟಗುಡ್ಡ, ರಾಜುಗೌಡ ಪಾಟಿಲ್, ಬಸು ನಾಯ್ಕರ್ ಸೇರಿದಂತೆ ಹಲವರು ವಶದಲ್ಲಿದ್ದಾರೆ.

ಇದಲ್ಲದೆ, ಕಾರ್ಖಾನೆ ಪರವಾಗಿ ಪ್ರತಿಭಟನಾಕಾರರಿಗೆ ಎದುರಾಗಿ ನಿಂತಿದ್ದ 5 ಜನರ ಮೇಲೂ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಈ ಗುಂಪು ಸಹ ಕಲ್ಲು ತೂರಾಟ, ವಾಹನ ಹಾನಿ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳನ್ನು ಎದುರಿಸುತ್ತಿದೆ.

ಪ್ರಭು ತಂಬೂರಿ, ಯಾಂಕಪ್ಪ ಕೇದಾರಿ, ವಿಠಲ ಹೊಸಮನಿ, ದಸ್ತಗಿರಿ ಸಾಬ್ ನದಾಫ್, ಶಿವಲಿಂಗ ಶಿಂಧೆ ಸೇರಿದಂತೆ ಸುಮಾರು 150 ಜನರನ್ನು ಈ ಪ್ರಕರಣದಲ್ಲಿ ಉಲ್ಲೇಖಿಸಲಾಗಿದ್ದು, ಇವರಲ್ಲಿ 5 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಕಬ್ಬಿಗೆ ಯೋಗ್ಯ ಬೆಲೆ ನೀಡಬೇಕು ಎಂಬ ಬೇಡಿಕೆಯಿಂದ ಆರಂಭವಾದ ರೈತರ ಪ್ರತಿಭಟನೆ, ಅಕ್ಟೋಬರ್ 13ರಂದು ಕಾರ್ಖಾನೆ ಗೇಟ್ ಬಳಿ ಉಗ್ರ ಸ್ವರೂಪ ಪಡೆದಿತ್ತು. ಒತ್ತಡ ಹೆಚ್ಚಿದ ವೇಳೆ ಕೆಲ ಕಿಡಿಗೇಡಿಗಳು ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ ಕಾರಣ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿತು.

error: Content is protected !!