January18, 2026
Sunday, January 18, 2026
spot_img

ಚಿಕ್ಕಮಗಳೂರಿನಲ್ಲಿ ಚಿನ್ನದ ನಿಕ್ಷೇಪ? ಶೋಧ ಕಾರ್ಯಕ್ಕೆ ಪರಿಸರ ಇಲಾಖೆ ಕೊಡುತ್ತಾ ಅನುಮತಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಫಿ ನಾಡು, ದಟ್ಟ ಅರಣ್ಯ ಹಾಗೂ ಪಶ್ಚಿಮ ಘಟ್ಟಗಳ ಸೊಬಗಿನಿಂದ ಪ್ರಸಿದ್ಧವಾಗಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪಗಳ ಶೋಧ ನಡೆಯಲಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಔರಮ್ ಜಿಯೋ ಎಕ್ಸ್‌ಪ್ಲೋರೇಶನ್ ಪ್ರೈವೇಟ್ ಲಿಮಿಟೆಡ್ ಕಂಪನಿ, ತರಿಕರೆಯ ಸುಮಾರು 10 ಸಾವಿರ ಎಕರೆ ಪ್ರದೇಶದಲ್ಲಿ ಕೊಳವೆ ಕೊರೆದು ಸಂಶೋಧನೆ ನಡೆಸಲು ಮನವಿ ಮಾಡಿದ್ದು, ಇದಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಈಗಾಗಲೇ ಪರವಾನಗಿ ನೀಡಿರುವುದು ದಾಖಲೆಗಳಿಂದ ತಿಳಿದುಬಂದಿದೆ. ಪರಿಸರ ಇಲಾಖೆ ಇದೀಗ ಈ ಮನವಿಗೆ ಅನುಮತಿ ನೀಡುವ ಕುರಿತು ಚಿಂತನೆ ನಡೆಸುತ್ತಿದೆ.

ಈ 10,082 ಎಕರೆ ಪ್ರದೇಶದಲ್ಲಿ 5,600 ಎಕರೆ ಅರಣ್ಯ ಮತ್ತು 3,600 ಎಕರೆ ಕೃಷಿ ಭೂಮಿ ಸೇರಿವೆ. ಚಿರತೆ, ಕರಡಿ ಸೇರಿದಂತೆ ಅನೇಕ ವನ್ಯಜೀವಿಗಳ ನೆಲೆಯಾಗಿರುವ ಅರಣ್ಯ ಪ್ರದೇಶವೂ ಇದರಲ್ಲಿ ಒಳಗೊಂಡಿರುವುದು ತಜ್ಞರಲ್ಲಿ ಆತಂಕ ಮೂಡಿಸಿದೆ. ಹಿಂದಿನ ಶೋಧ ಕಾರ್ಯಗಳಲ್ಲಿ ತರಿಕರೆಯ ಭಾಗದಲ್ಲಿ ಪ್ರತಿ ಟನ್ ಶಿಲೆಯಿಂದ 19 ರಿಂದ 80 ಗ್ರಾಂವರೆಗೆ ಚಿನ್ನ ದೊರಕುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ. ಜೊತೆಗೆ ಹೊಸೂರಿನ ಸಿಂಗನಮನೆ, ತಂಬಾಡಿಹಳ್ಳಿ, ಗೋಣಿಬೀಡು ಮತ್ತು ಹೊನ್ನುಹಟ್ಟಿ ಭಾಗದಲ್ಲಿಯೂ ಚಿನ್ನದ ನಿಕ್ಷೇಪಗಳ ದಾಖಲೆಗಳಿವೆ.

ಕಂಪನಿಯು ಪರಿಸರಕ್ಕೆ ಹಾನಿಯಾಗದಂತೆ ಶೋಧ ಕಾರ್ಯ ನಡೆಸುವುದಾಗಿ ಭರವಸೆ ನೀಡಿದೆ. ಟ್ರೆಂಚಿಂಗ್ ಮತ್ತು ಡ್ರಿಲ್ಲಿಂಗ್ ವೇಳೆ ಮಾಲಿನ್ಯ ಕಡಿಮೆ ಮಾಡುವ ಕ್ರಮಗಳನ್ನು ಕೈಗೊಳ್ಳುವುದಾಗಿ, ಕಾರ್ಯ ಮುಗಿದ ನಂತರ ಕೊಳವೆ ಮತ್ತು ಹೊಂಡಗಳನ್ನು ಮುಚ್ಚಿ ಭೂಮಿಯನ್ನು ಮೂಲ ಸ್ಥಿತಿಗೆ ತರುವುದಾಗಿ ತಿಳಿಸಿದೆ. ಆದಾಗ್ಯೂ, ಚಿಕ್ಕಮಗಳೂರಿನ ವನ್ಯಜೀವಿ ತಜ್ಞರು ಶೋಧ ಕಾರ್ಯ ವನ್ಯಜೀವಿಗಳ ಮೇಲೆ ಪರಿಣಾಮ ಬೀರಬಹುದೆಂದು ಎಚ್ಚರಿಕೆ ನೀಡಿದ್ದಾರೆ. ಈ ಪ್ರದೇಶವು ಲಕ್ಕವಳ್ಳಿ ಆನೆ ಕಾರಿಡಾರ್‌ನ ಭಾಗವಾಗಿರುವುದರಿಂದ ಅರಣ್ಯ ಜೀವಿಗಳಿಗೆ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Must Read

error: Content is protected !!