ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಗತ್ತಿನಲ್ಲಿ ಅತಿ ಹೆಚ್ಚು ಚಿನ್ನ ಇಟ್ಟುಕೊಂಡಿರುವ ಟಾಪ್-2 ದೇಶಗಳ ಪಟ್ಟಿಯಲ್ಲಿ ಭಾರತ ಮತ್ತು ಚೀನಾ ಸ್ಥಾನ ಪಡೆದಿವೆ. ಭಾರತೀಯರ ಪಾಲಿಗೆ ಚಿನ್ನ ಎಂದರೆ ಕೇವಲ ಅಲಂಕಾರಿಕ ವಸ್ತುವಲ್ಲ; ಅದು ಕಷ್ಟಕಾಲಕ್ಕೆ ಆಸರೆಯಾಗುವ ಅಮೂಲ್ಯ ಸಂಪತ್ತು. ಹೀಗಾಗಿಯೇ, ಭಾರತದಲ್ಲಿ ಚಿನ್ನದ ಮಾರಾಟ ಪ್ರಮಾಣ ಅತ್ಯಧಿಕ.
ಆರ್ಥಿಕ ಸಂಸ್ಥೆ ಮಾರ್ಗನ್ ಸ್ಟಾನ್ಲೀ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಭಾರತೀಯರ ಮನೆಗಳಲ್ಲಿ ಇರುವ ಚಿನ್ನದ ಒಟ್ಟು ಮೌಲ್ಯ ಬರೋಬ್ಬರಿ 3.8 ಟ್ರಿಲಿಯನ್ ಡಾಲರ್! ಇದು ಪ್ರಸ್ತುತ ಭಾರತದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇ. 88.8ರಷ್ಟಾಗಿದೆ. ಅಂದರೆ, ಭಾರತೀಯರ ಖಾಸಗಿ ಚಿನ್ನದ ನಿಧಿಯು ದೇಶದ ಬಹುತೇಕ ಜಿಡಿಪಿಗೆ ಸಮವಾಗಿದೆ ಎಂಬುದು ಅಚ್ಚರಿಯ ಸಂಗತಿ.
ವರದಿಯ ಪ್ರಕಾರ, ಕೇಂದ್ರ ಸರ್ಕಾರ ಜಿಎಸ್‌ಟಿ ಮತ್ತು ಆದಾಯ ತೆರಿಗೆಯಂತಹ ನೇರ ಮತ್ತು ಪರೋಕ್ಷ ತೆರಿಗೆಗಳಲ್ಲಿ ಗಣನೀಯ ಕಡಿತಗೊಳಿಸಿರುವುದು ಜನರ ಉಳಿತಾಯವನ್ನು ಹೆಚ್ಚಿಸಿದೆ. ಈ ಹೆಚ್ಚುವರಿ ಉಳಿತಾಯವು ಚಿನ್ನದ ಖರೀದಿಗೆ ಹೆಚ್ಚಿನ ಪುಷ್ಟಿ ನೀಡಿದೆ ಎಂಬುದು ಮಾರ್ಗನ್ ಸ್ಟಾನ್ಲೀ ಅಭಿಪ್ರಾಯವಾಗಿದೆ.
ಭಾರತೀಯ ಮನೆಗಳಲ್ಲಿ ಮಾತ್ರವಲ್ಲದೆ, ದೇಶದ ಕೇಂದ್ರೀಯ ಬ್ಯಾಂಕ್ ಆದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕೂಡ ತನ್ನ ಚಿನ್ನದ ಸಂಗ್ರಹವನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. 2024ರಿಂದ ಈಚೆಗೆ ಆರ್‌ಬಿಐ ಬರೋಬ್ಬರಿ 75 ಟನ್‌ಗಳಷ್ಟು ಚಿನ್ನವನ್ನು ಖರೀದಿಸಿದೆ. ಇದರಿಂದಾಗಿ, ಆರ್ಬಿಐನ ವಿದೇಶೀ ವಿನಿಮಯ ಮೀಸಲು ನಿಧಿಯಲ್ಲಿರುವ ಒಟ್ಟು ಚಿನ್ನದ ಸಂಗ್ರಹ 880 ಟನ್‌ಗಳಿಗೆ ಏರಿದೆ. ಪ್ರಸ್ತುತ, ಒಟ್ಟು ಫಾರೆಕ್ಸ್ ರಿಸರ್ವ್ಸ್‌ನಲ್ಲಿ ಚಿನ್ನದ ಪಾಲು ಶೇ. 14ರಷ್ಟಿದೆ.
ಎಫ್‌ಡಿ (FD) ಬದಲು ಈಗ ಇಕ್ವಿಟಿ ಟ್ರೆಂಡ್!
ಮಾರ್ಗನ್ ಸ್ಟಾನ್ಲೀ ವರದಿಯಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆಯನ್ನು ಗುರುತಿಸಲಾಗಿದೆ. ಸಾಂಪ್ರದಾಯಿಕ ಹೂಡಿಕೆ ವಿಧಾನಗಳಿಂದ ಜನರು ಈಗ ಷೇರು ಮಾರುಕಟ್ಟೆಯತ್ತ ಹೊರಳುತ್ತಿದ್ದಾರೆ.
2024-25ರ ಆರ್ಥಿಕ ವರ್ಷದಲ್ಲಿ ಭಾರತೀಯರ ಗೃಹ ಉಳಿತಾಯದ ಪೈಕಿ ಈಕ್ವಿಟಿ ಅಥವಾ ಷೇರುಗಳಲ್ಲಿನ ಹೂಡಿಕೆ ಪ್ರಮಾಣ ಶೇ. 15.1ಕ್ಕೆ ಏರಿಕೆಯಾಗಿದೆ. ಹಿಂದಿನ ವರ್ಷ, ಅಂದರೆ 2023-24ರಲ್ಲಿ ಇದು ಕೇವಲ ಶೇ. 8.7ರಷ್ಟು ಮಾತ್ರ ಇತ್ತು. ಕೇವಲ ಒಂದು ವರ್ಷದ ಅವಧಿಯಲ್ಲಿ ಹೂಡಿಕೆ ಪ್ರಮಾಣ ಸುಮಾರು ಎರಡು ಪಟ್ಟು ಹೆಚ್ಚಾಗಿರುವುದು, ಜನರು ಹೆಚ್ಚು ಅಪಾಯ ಸಹಿಸುವ ಮತ್ತು ಹೆಚ್ಚು ಆದಾಯ ನಿರೀಕ್ಷಿಸುವ ಇಕ್ವಿಟಿ ಹೂಡಿಕೆಯತ್ತ ಆಕರ್ಷಿತರಾಗುತ್ತಿರುವುದನ್ನು ಸ್ಪಷ್ಟಪಡಿಸುತ್ತದೆ.
ಇದೇ ವೇಳೆ, ಸಾಮಾನ್ಯ ಜನರು ಹೆಚ್ಚಾಗಿ ಅವಲಂಬಿಸಿದ್ದ ಸಾಂಪ್ರದಾಯಿಕ ಹೂಡಿಕೆ ವಿಧಾನವಾದ ಫಿಕ್ಸೆಡ್ ಡೆಪಾಸಿಟ್ (FD)ಗಳಲ್ಲಿನ ಹೂಡಿಕೆ ಇಳಿಕೆಯಾಗಿದೆ. ಭಾರತೀಯರ ಮನೆಯ ಉಳಿತಾಯದಲ್ಲಿ ಠೇವಣಿಗಳ ಪಾಲು 2023-24ರಲ್ಲಿ ಶೇ. 40ರಷ್ಟಿತ್ತು. ಆದರೆ, 2024-25ರಲ್ಲಿ ಅದು ಶೇ. 35ಕ್ಕೆ ಕುಸಿದಿದೆ. ಇದು ಭಾರತೀಯರ ಉಳಿತಾಯ ವಿಧಾನದಲ್ಲಿ ಮಹತ್ವದ ಬದಲಾವಣೆಯ ಸಂಕೇತ ನೀಡಿದೆ.