ಹೊಸದಿಗಂತ ಡಿಜಿಟಲ್ ಡೆಸ್ಕ್:
18 ವರ್ಷಗಳ ಸುದೀರ್ಘ ಕಾಯುವಿಕೆಗೆ ತೆರೆಬಿದ್ದಿದೆ. ಕಳೆದ ಬಾರಿ ರಜತ್ ಪಾಟಿದಾರ್ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಚಾರಿತ್ರಿಕ ಜಯ ದಾಖಲಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಈ ಬಾರಿ ಕಣಕ್ಕಿಳಿಯುತ್ತಿರುವುದು ಕೇವಲ ತಂಡವಾಗಿ ಅಲ್ಲ, ಬದಲಿಗೆ ‘ಕಿಂಗ್’ ಆಗಿ!
ಈ ಐತಿಹಾಸಿಕ ವಿಜಯದ ನೆನಪಿಗಾಗಿ 2026ರ ಐಪಿಎಲ್ ಆವೃತ್ತಿಯಲ್ಲಿ ಆರ್ಸಿಬಿ ಆಟಗಾರರು ಒಂದು ವಿಶೇಷ ಮತ್ತು ವಿಶಿಷ್ಟ ಬದಲಾವಣೆಯೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.
ಲೀಗ್ನ ಹಾಲಿ ಚಾಂಪಿಯನ್ ಎಂಬ ಹೆಮ್ಮೆಯ ಸಂಕೇತವಾಗಿ, ಆರ್ಸಿಬಿ ತಂಡದ ಜೆರ್ಸಿಯ ಮೇಲೆ ಚಿನ್ನದ ಬಣ್ಣದ ಐಪಿಎಲ್ ಲೋಗೋ ಇರಲಿದೆ. ಉಳಿದ 9 ತಂಡಗಳು ಸಾಮಾನ್ಯ ಲೋಗೋದೊಂದಿಗೆ ಆಡಲಿವೆ.
ಇದೇ ಮೊದಲ ಬಾರಿಗೆ ಆರ್ಸಿಬಿ ಜೆರ್ಸಿಯ ಮೇಲೆ ಒಂದು ಹೊಳೆಯುವ ಚಿನ್ನದ ನಕ್ಷತ್ರ ಕಾಣಿಸಿಕೊಳ್ಳಲಿದೆ. ಇದು ತಂಡದ ಮೊದಲ ಐಪಿಎಲ್ ಟ್ರೋಫಿ ಗೆಲುವಿನ ಸಂಕೇತವಾಗಿದೆ.
ಈ ವಿಶೇಷ ಬ್ಯಾಡ್ಜ್ ಧರಿಸಿ ಆಡುವ ಮೂಲಕ ಬೆಂಗಳೂರು ತಂಡ ತನ್ನ ‘ಚಾಂಪಿಯನ್’ ಪಟ್ಟವನ್ನು ಕ್ರೀಡಾಂಗಣದಲ್ಲಿ ಹೆಮ್ಮೆಯಿಂದ ಪ್ರದರ್ಶಿಸಲಿದೆ.
2026ರ ಐಪಿಎಲ್ ಹಬ್ಬವು ಮಾರ್ಚ್ 28 ರಿಂದ ಆರಂಭವಾಗಲಿದೆ. ತವರಿನ ಮೈದಾನವಾದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.



