Friday, January 9, 2026

Gold Rate | ವೆನಿಜುವೆಲಾ ಸಂಘರ್ಷದ ಬೆನ್ನಲ್ಲೇ ಆಕಾಶ ಮುಟ್ಟಿದ ಹಳದಿ ಲೋಹದ ಬೆಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾರಾಂತ್ಯದಲ್ಲಿ ಕೊಂಚ ತಣ್ಣಗಾಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ವಾರದ ಆರಂಭದಲ್ಲೇ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿವೆ. ಅಂತಾರಾಷ್ಟ್ರೀಯ ರಾಜಕೀಯ ಬೆಳವಣಿಗೆಗಳು ಭಾರತೀಯ ಚಿನಿವಾರಪೇಟೆಯ ಮೇಲೆ ನೇರ ಪರಿಣಾಮ ಬೀರಿದ್ದು, ಇಂದು ಸೋಮವಾರ ಬೆಲೆಗಳಲ್ಲಿ ಭರ್ಜರಿ ಏರಿಕೆ ಕಂಡುಬಂದಿದೆ.

ವೆನಿಜುವೆಲಾ ಅಧ್ಯಕ್ಷರನ್ನು ಅಮೆರಿಕ ಸೆರೆಹಿಡಿದು ಕರೆದೊಯ್ದ ಘಟನೆಯು ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ಈ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಮುಖ ಮಾಡಿದ್ದಾರೆ. ಇದರ ಪರಿಣಾಮವಾಗಿ ಭಾರತದಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಮ್‌ಗೆ 145 ರೂ. ಏರಿಕೆಯಾಗಿದೆ. ಇನ್ನು ಬೆಳ್ಳಿಯ ದರ ಕೂಡ ಪ್ರತಿ ಕೆಜಿಗೆ 6,000 ದಿಂದ 8,000 ರೂ. ವರೆಗೆ ಜಿಗಿತ ಕಂಡಿದೆ.

ಚಿನ್ನ ಮತ್ತು ಬೆಳ್ಳಿಯ ಇಂದಿನ ಅಂದಾಜು ದರಗಳು ಈ ಕೆಳಗಿನಂತಿವೆ:

22 ಕ್ಯಾರಟ್ ಚಿನ್ನ (10 ಗ್ರಾಮ್): 1,25,950 ರೂ.

24 ಕ್ಯಾರಟ್ ಅಪರಂಜಿ ಚಿನ್ನ (10 ಗ್ರಾಮ್): 1,37,400 ರೂ.

ಬೆಳ್ಳಿ (100 ಗ್ರಾಮ್): 24,700 ರೂ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,25,950 ರೂ. ಇದ್ದರೆ, ಬೆಳ್ಳಿ 100 ಗ್ರಾಮ್‌ಗೆ 24,700 ರೂ. ತಲುಪಿದೆ. ಇನ್ನುಳಿದಂತೆ ಕೇರಳ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಬೆಳ್ಳಿಯ ಬೆಲೆ ಮತ್ತಷ್ಟು ಗರಿಷ್ಠ ಮಟ್ಟಕ್ಕೆ ಏರಿದ್ದು, 26,500 ರೂ. (100 ಗ್ರಾಮ್‌ಗೆ) ವರೆಗೂ ಮಾರಾಟವಾಗುತ್ತಿದೆ.

ಜಾಗತಿಕ ಅನಿಶ್ಚಿತತೆ ಮುಂದುವರಿದರೆ ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

error: Content is protected !!