ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ನಟಿ ರನ್ಯಾ ರಾವ್ ಮತ್ತು ಇಬ್ಬರು ಸಹಚರರ ವಿರುದ್ಧ ಚಿನ್ನ ಕಳ್ಳಸಾಗಣೆ ಹಾಗೂ ಹಣಕಾಸು ಅಕ್ರಮ ಪ್ರಕರಣದಲ್ಲಿ ED ಚಾರ್ಜ್‌ಶೀಟ್ ಸಲ್ಲಿಸಿದೆ.
ಮಾರ್ಚ್ 2024ರಿಂದ ಮಾರ್ಚ್ 2025ರವರೆಗೆ ಸುಮಾರು 127 ಕೆ.ಜಿ. ವಿದೇಶೀ ಮೂಲದ ಚಿನ್ನವನ್ನು ಭಾರತಕ್ಕೆ ಅಕ್ರಮವಾಗಿ ತರಲಾಗಿದ್ದು, ಇದರ ಮೌಲ್ಯ ₹102 ಕೋಟಿ ಮೀರಿದೆ ಎಂದು ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.
ವಿದೇಶದಲ್ಲಿ ಖರೀದಿಸಿದ ಚಿನ್ನವನ್ನು ದೇಶೀಯ ಮಾರುಕಟ್ಟೆಯಲ್ಲಿ ನಗದು ರೂಪದಲ್ಲಿ ಮಾರಾಟ ಮಾಡಿ, ಆ ಹಣವನ್ನು ಹವಾಲಾ ಜಾಲ ಮತ್ತು ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಕಾನೂನುಬದ್ಧ ವ್ಯವಹಾರಗಳಂತೆ ತೋರಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಪ್ರಕರಣ ಡಿಆರ್‌ಐ ನೀಡಿದ ದೂರು ಆಧರಿಸಿ ಸಿಬಿಐ ದಾಖಲಿಸಿದ ಎಫ್‌ಐಆರ್‌ನಿಂದ ಆರಂಭವಾಗಿದ್ದು, ಬಳಿಕ ಪಿಎಂಎಲ್‌ಎ ಕಾಯ್ದೆಯಡಿ ಇಡಿ ತನಿಖೆ ಮುಂದುವರಿಸಿದೆ.
ಇದನ್ನೂ ಓದಿ:
2025ರ ಮಾರ್ಚ್ 3ರಂದು ದುಬೈಯಿಂದ ಬೆಂಗಳೂರಿಗೆ ಬಂದ ವೇಳೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ರನ್ಯಾರನ್ನು ಬಂಧಿಸಿದ್ದರು. ಅವರಿಂದ 14 ಕೆ.ಜಿ. ಚಿನ್ನ ವಶಪಡಿಸಿಕೊಳ್ಳಲಾಗಿತ್ತು. ಮುಂದಿನ ಶೋಧದಲ್ಲಿ ಚಿನ್ನಾಭರಣ ಹಾಗೂ ಕೋಟ್ಯಾಂತರ ನಗದು ಪತ್ತೆಯಾಗಿದೆ.
ಇಡಿ ತನಿಖೆಯಲ್ಲಿ ರನ್ಯಾ ಹೆಸರಿನಲ್ಲಿರುವ ಸುಮಾರು ₹34 ಕೋಟಿ ಮೌಲ್ಯದ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದೆ. ಪ್ರಕರಣವು ಸಂಘಟಿತ ಅಕ್ರಮ ಜಾಲವೊಂದನ್ನು ಬಹಿರಂಗಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



